

ಬೆಂಗಳೂರು: ಡಿ.ವಿ.ಸದಾನಂದಗೌಡ ಆಯಿತು, ಮುಂದೆ ಯಾರು ಎಂಬ ಪ್ರಶ್ನೆಯ ಸುನಾಮಿಯು ರಾಜ್ಯ ಬಿಜೆಪಿ ಹಿರಿಯರಿಗೆ ಆತಂಕ ತಂದೊಡ್ಡಿದೆ. ಪಕ್ಷದ ವರಿಷ್ಠರು ಇತ್ತೀಚೆಗೆ ಡಿವಿಎಸ್ ಅವರನ್ನು ದೆಹಲಿಗೆ ಆಹ್ವಾನಿಸಿ, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಮೂಲಕ ನೀಡಿದ ಸಂದೇಶವೀಗ ನಿಚ್ಚಳವಾಗಿದೆ. ನಿರೀಕ್ಷೆಯಂತೆ ಸದಾನಂದಗೌಡರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಪ್ರಕಟಿಸಿದ್ದಾರೆ. ಪಕ್ಷವು ನನಗೆ ಎಲ್ಲವನ್ನೂ ಕೊಟ್ಟಿದೆ ಎಂಬ ‘ಪಾಠ’ವನ್ನು ಒಪ್ಪಿಸಿದ್ದಾರೆ. ಆದರೆ ವಿಧಾನಸಭೆ ಚುನಾವಣೆಯ ವಿದ್ಯಮಾನವು ದೆಹಲಿ ನಾಯಕರು ಪಾಠ ಕಲಿತು, ಎಚ್ಚರಿಕೆಯ ನಡೆಯಿಟ್ಟಿರುವ ಫಲವೇ ಹಿರಿಯರಿಗೆ ಗೌರವಪೂರ್ಣ ವಿದಾಯ.
ಹೊಸಬರಿಗೆ ಮಣೆ ನಿಶ್ಚಿತ: ಲೋಕಸಭೆ ಚುನಾವಣೆಗೆ ಹೊಸ ಮುಖಗಳಿಗೆ ಮಣೆ ಹಾಕುವುದು ನಿಶ್ಚಿತವಾಗಿದೆ. ಅದಕ್ಕೂ ಮುನ್ನ ಹಾಲಿ ಸಂಸದರಲ್ಲಿ ಯಾರೆಲ್ಲ, ಕಳಪೆ ಸಾಧನೆ, ವಯಸ್ಸು ಹಾಗೂ ಅನಾರೋಗ್ಯ ಕಾರಣಕ್ಕೆ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ರಮೇಶ್ ಜಿಗಜಿಣಗಿ, ಗದ್ದಿಗೌಡರ್, ಜಿ.ಎಂ.ಸಿದ್ಧೇಶ್ವರ್ ಇನ್ನೂ ಒಂದಿಬ್ಬರು ವಯಸ್ಸು ಮತ್ತು ಅನಾರೋಗ್ಯ ಕಾರಣದಿಂದ ಒಬ್ಬರು ಸ್ವಯಂಪ್ರೇರಣೆ, ಒಂದಿಬ್ಬರು ಕಳಪೆ ಸಾಧನೆ, ಜೆಡಿಎಸ್ ಜತೆಗಿನ ಮೈತ್ರಿ ಕಾರಣಕ್ಕೆ ಅವಕಾಶ ಕಳೆದುಕೊಳ್ಳುವ ಸಂಭವವಿದೆ ಎಂದು ರ್ತಸಲಾಗುತ್ತಿದೆ. ರಾಜ್ಯದ ಲೋಕಸಭಾ ಕ್ಷೇತ್ರಗಳ ಒಟ್ಟು ಚಿತ್ರಣ, ಹಾಲಿ ಸಂಸದರ ಕಾರ್ಯವೈಖರಿ ಆಧರಿಸಿ ವರಿಷ್ಠರ ಮನದಲ್ಲೇನಿದೆ ಎಂಬ ಸುಳಿವು ಹಲವರಿಗೆ ದೊರೆತಿದೆ. ಸದಾನಂದಗೌಡರ ಮೂಲಕ ಮುಂದಿನ ನಡೆಗೆ ನಾಂದಿ ಹಾಡಿದ್ದು, ಮತ್ತೆ ಯಾರನ್ನು ದೆಹಲಿಗೆ ಕರೆಯಿಸಿ ಏನು ಹೇಳುತ್ತಾರೋ ಎಂಬ ಕಾತರ, ಕಳವಳವು ಹಿರಿ‘ತಲೆ’ಗೆ ಬಿಸಿ ತಾಗಿಸಿದೆ.
ಚುನಾವಣೆಗೆ ನಿಲ್ಲದೆ ಪಕ್ಷದ ಕಾರ್ಯಕ್ರಮ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕೇಂದ್ರದ ನಾಯಕರು ನೀಡಿದ ಸೂಚನೆಯನ್ನು ಸದಾನಂದಗೌಡರು ಪಾಲಿಸಿದ್ದಾರೆ. ಇನ್ಮುಂದೆ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತಾರೆ. | ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೊಷಣೆ ಹಿಂದೆ ಯಾವುದೇ ರಾಜಕೀಯ ಒತ್ತಡ ಇಲ್ಲ. ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. 30 ವರ್ಷಗಳಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ. ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದೆ. ಕೇಂದ್ರ ಸರ್ಕಾರದಲ್ಲಿ 7 ವರ್ಷ ಸಚಿವನಾಗಿ ಪ್ರಧಾನಿ ಮೋದಿ ಜತೆ ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿಯೂ ಪಕ್ಷ ಮುನ್ನಡೆಸಿದ್ದೇನೆ. | ಡಿ.ವಿ.ಸದಾನಂದಗೌಡ, ಕೇಂದ್ರ ಮಾಜಿ ಸಚಿವ