

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು
ಏಷ್ಯಾದ ಅತಿದೊಡ್ಡ ಏಕಶಿಲಾಬೆಟ್ಟವಿರುವ ಮಧುಗಿರಿ ಕ್ಷೇತ್ರದಲ್ಲೀಗ ಚುನಾವಣಾ ಕಾವು ಏರಿದೆ. ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧವೇ ಬಹಿರಂಗವಾಗಿ ತೊಡೆತಟ್ಟಿ ‘ಮೈತ್ರಿಧರ್ಮ’ ಮುರಿದಿದ್ದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಸೋಲಿನ ಸೇಡುತೀರಿಸಿಕೊಳ್ಳಲು ಗೌಡರ ಕುಟುಂಬ ವ್ಯೂಹ ಹೆಣೆಯುತ್ತಿದೆ. ಸೇಡಿನ ರಾಜಕಾರಣದ ಅಖಾಡದಲ್ಲಿ ಈ ಬಾರಿ ‘ಭಾವನಾತ್ಮಕ’ಅಸ್ತ್ರ ಹೂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಬಳಗದ ರಾಜಣ್ಣಗೆ ಮಗ್ಗಲು ಮುರಿಯಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತ್ಯಸ್ತ್ರ ಬಳಸಲಿದ್ದು ಇದು ಎಚ್ಡಿಕೆ ವರ್ಸಸ್ ಕೆಎನ್ನಾರ್ ನಡುವಿನ ಕಣವಾಗಿ ಮಾರ್ಪಟ್ಟಿದೆ.
ರಾಜಕೀಯ ಮರುಜನ್ಮ ನೀಡಿದ ಕ್ಷೇತ್ರದಲ್ಲಿ ಅಭಿವೃದ್ಧಿಪರ್ವದ ಹೊರತಾಗಿಯೂ ಕಳೆದ ಚುನಾವಣೆಯ ಸೋಲಿನ ಆಘಾತದಿಂದ ಚೇತರಿಸಿಕೊಂಡಿರುವ ರಾಜಣ್ಣ ‘ಇದು ನನ್ನ ಕೊನೆಯ ಚುನಾವಣೆ’ ಎಂದು ‘ಭಾವನಾತ್ಮಕ’ ದಾಳ ಉರುಳಿಸಿದ್ದಾರೆ. ಆರೋಗ್ಯದ ನೆಪ ಹೇಳಿ ಚುನಾವಣಾ ಕಣದಿಂದಲೇ ಹಿಂದೆ ಸರಿಯುವುದಾಗಿ ಘೊಷಿಸಿದ್ದ ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ಅವರನ್ನೇ ಮನವೊಲಿಸಿ ಮತ್ತೊಮ್ಮೆ ಕಣಕ್ಕಿಳಿಸುವ ಮೂಲಕ ಕುಮಾರಸ್ವಾಮಿ ‘ಚೆಕ್’ ನೀಡಿರುವುದು ಕ್ಷೇತ್ರದಲ್ಲೀಗ ಕದನ ಕುತೂಹಲ ಹುಟ್ಟುಹಾಕಿದೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಮಧುಗಿರಿ 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಸಾಮಾನ್ಯ ಕ್ಷೇತ್ರವಾಯಿತು. ಕ್ಷೇತ್ರ ಪ್ರತಿನಿಧಿಸುತ್ತಿದ್ದ ಜಿ.ಪರಮೇಶ್ವರ್ ನೆರೆಯ ಕೊರಟಗೆರೆಯತ್ತ ಮುಖಮಾಡಿದರೆ, ಕಾಂಗ್ರೆಸ್ ತೊರೆದು ಜೆಡಿಎಸ್ ಕೈಹಿಡಿದಿದ್ದ ರಾಜಣ್ಣ 2004ರಲ್ಲಿ ಬೆಳ್ಳಾವಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. ಬೆಳ್ಳಾವಿ ಕ್ಷೇತ್ರ ಅಸ್ತಿತ್ವ ಕಳೆದುಕೊಂಡ ಬಳಿಕ ಮತ್ತೆ ಮಾತೃಪಕ್ಷಕ್ಕೆ ಮರಳಿದ ರಾಜಣ್ಣ ರಾಜಕೀಯ ಭವಿಷ್ಯ ಅರಸಿ ಮಧುಗಿರಿಗೆ ಕಾಲಿಟ್ಟರು.
ಡಿಸಿಸಿ ಬ್ಯಾಂಕ್ನಲ್ಲಿ ಹಿಡಿತ ಸಾಧಿಸಿ ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ರಾಜಣ್ಣ ಜಾತಿಬಲವಿಲ್ಲದಿದ್ದರೂ 2008ರ ಸಾರ್ವತ್ರಿಕ ಹಾಗೂ 2009ರ ಬೈಎಲೆಕ್ಷನ್ನಲ್ಲಿ ಅತ್ಯಲ್ಪ ಮತಗಳಿಂದ ಸೋಲುಂಡರು. ಇದರಿಂದ ಕಂಗೆಡದ ಕೆಎನ್ನಾರ್ ಕ್ಷೇತ್ರದ ನಂಟು ಕಳಚಿಕೊಳ್ಳದೆ ಡಿಸಿಸಿ ಬ್ಯಾಂಕ್ ಅಧಿಕಾರ ಬಳಸಿಕೊಂಡು ಈ ಅವಧಿಯಲ್ಲಿ ಜನರಿಗೆ ಬಹಳ ಹತ್ತಿರವಾದರು. ಅದರ ಪರಿಣಾಮ 2013ರ ವಿಧಾನಸಭೆ ಚುನಾವಣೆಯಲ್ಲಿ ರಾಜಣ್ಣರನ್ನು ಕ್ಷೇತ್ರದ ಜನ ಕೈಹಿಡಿದರು. ಈ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದರೂ ರಾಜಣ್ಣ ತಮ್ಮ ಪ್ರಭಾವಬೀರಿ ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿಸುವ ಮೂಲಕ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕೆಲಸ ಮಾಡಿಸಿ ಮಧುಗಿರಿಗೆ ಜಿಲ್ಲೆಯ ಇಮೇಜ್ ತಂದುಕೊಟ್ಟರು. ಅಭಿವೃದ್ಧಿ ಜತೆಜತೆಗೆ ರಾಜಣ್ಣ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡು, ಆಪ್ತರನ್ನು ದೂರ ಮಾಡಿಕೊಂಡರು. ಅಲ್ಲದೆ, ಪ್ರಬಲ ಒಕ್ಕಲಿಗ ಸಮುದಾಯದವರು ರಾಜಣ್ಣ ವಿರುದ್ಧ ತಿರುಗಿಬಿದ್ದರು. 2018ರ ಚುನಾವಣೆಯಲ್ಲಿ ಜನರ ತೀರ್ಪಿಗೆ ಕೆಎನ್ನಾರ್ ತಲೆಬಾಗುವಂತಾಯಿತು.
ಮಧುಗಿರಿಯನ್ನು ಸಂಘಟನಾತ್ಮಕ ಜಿಲ್ಲೆಯಾಗಿ ರಚಿಸಿಕೊಂಡ ಬಳಿಕವೂ ಬಿಜೆಪಿ ಸಂಘಟಿತವಾಗಿ ಶಕ್ತಿಶಾಲಿ ಆಗಿಲ್ಲ. ಉಪಚುನಾವಣೆ ಹೊರತು ಬಿಜೆಪಿಗೆ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ಠೇವಣಿ ಬಂದಿಲ್ಲ. ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಎಂಎಲ್ಸಿ ಚಿದಾನಂದಗೌಡ ಹೆಸರು ಕೇಳಿಬರುತ್ತಿದ್ದು ಗೆಲುವಿಗಿಂತ ಸಂಘಟನೆ ದೃಷ್ಟಿಯಲ್ಲಿ ಬಿಜೆಪಿ ಶಕ್ತಿ ವೃದ್ಧಿಸಿಕೊಳ್ಳಲು ಸಮರ್ಥ ಅಭ್ಯರ್ಥಿಗಾಗಿ ಶೋಧ ನಡೆದಿದೆ. ಪ್ರತಿ ಚುನಾವಣೆಯಂತೆ ಈ ಬಾರಿಯೂ ಕಾಂಗ್ರೆಸ್-ಜೆಡಿಎಸ್ ನಡುವೆಯೇ ನೇರ ಪೈಪೋಟಿ ಇದೆ. ಇನ್ನೂ ಜೆಡಿಎಸ್ ಪಂಚರತ್ನ ರಥಯಾತ್ರೆ ಯಶಸ್ಸು ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.
ಕುಂಚಿಟಿಗರ ಪ್ರಾಬಲ್ಯ: ಮಧುಗಿರಿಯಲ್ಲಿ ಕುಂಚಿಟಿಗ ಒಕ್ಕಲಿಗರ ಪ್ರಾಬಲ್ಯವಿದೆ. ಪರಿಶಿಷ್ಟ ಜಾತಿ, ಪಂಗಡದ ಮತಗಳ ಸಂಖ್ಯೆಯೂ ಹೆಚ್ಚಿದೆ. ನಂತರ ಕುರುಬರು, ಗೊಲ್ಲರು, ನಾಯಕರು, ಲಿಂಗಾಯತರಿದ್ದಾರೆ. ಅಹಿಂದ ಮತಗಳ ಕ್ರೋಡೀಕರಣ ಕಾಂಗ್ರೆಸ್ಗೆ ಹೆಚ್ಚಿನ ಬಲ ತಂದುಕೊಡಲಿದೆ ಎಂಬ ಲೆಕ್ಕಾಚಾರ ಇದೆ. ಕುಂಚಿಟಿಗ ಒಕ್ಕಲಿಗ ಸಮುದಾಯದ ವೀರಭದ್ರಯ್ಯ ಹಾಗೂ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ರಾಜಣ್ಣ ನಡುವೆಯೇ ಈ ಬಾರಿಯೂ ನೇರ ಹಣಾಹಣಿ ಏರ್ಪಟ್ಟಿದೆ. ಮಧುಗಿರಿ ಸಂಘಟನಾತ್ಮಕ ಜಿಲ್ಲೆ ಆದ ಬಳಿಕ ನೆಲೆಯೇ ಇಲ್ಲದ ಬಿಜೆಪಿಯಲ್ಲಿ ಚುನಾವಣೆ ಉತ್ಸಾಹ ಕಂಡು ಬರುತ್ತಿದೆಯಾದರೂ ಸಮರ್ಥ ಅಭ್ಯರ್ಥಿಯ ಹುಡುಕಾಟ ನಡೆದಿದೆ.
ಬಿಜೆಪಿಯ ಅಚ್ಚರಿ ಅಭ್ಯರ್ಥಿ!: ಕಳೆದ ಲೋಕಸಭೆ ಚುನಾವಣೆಯ ಅಭೂತಪೂರ್ವ ಮತಗಳಿಕೆ ಬಿಜೆಪಿಯಲ್ಲಿ ರಣೋತ್ಸಾಹ ಹೆಚ್ಚಲು ಕಾರಣವಾಗಿದೆ. ಹಾಗಾಗಿ, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ನಾಯಕ ಸಮುದಾಯದ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜುಗೆ ಗಾಳ ಹಾಕಲು ಮುಂದಾಗಿದೆ. ಜೆಡಿಎಸ್ನಿಂದ ಸ್ಪರ್ಧಿಸಲು ಕಣ್ಣಿಟ್ಟಿದ್ದ ನಾಗರಾಜುಗೆ ಎಂವಿವಿ ಅಭ್ಯರ್ಥಿಯನ್ನಾಗಿ ಘೊಷಿಸಿರುವುದು ನಿರಾಸೆ ತಂದಿದೆ. ಇದನ್ನು ಎನ್ಕ್ಯಾಶ್ ಮಾಡಲು ಬಿಜೆಪಿ ಹೊರಟಂತಿದೆ.