ರೇಸ್‌ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್​ ಅಂಬರೀಷ್ ಹೆಸರು; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

Amabareesh
Published on

ಬೆಂಗಳೂರು: ರಾಜಧಾನಿಯಲ್ಲಿನ ಪ್ರಮುಖ ರಸ್ತೆಗೆ ಪುನೀತ್ ರಾಜಕುಮಾರ್​ ನಾಮಕರಣ ಮಾಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೇಸ್​ಕೋರ್ಸ್​ ರಸ್ತೆಗೆ ರೆಬೆಲ್ ಸ್ಟಾರ್ ಅಂಬರೀಷ್ ಹೆಸರಿಡುವುದಾಗಿ ಘೋಷಣೆ ಮಾಡಿದರು.

ಪದ್ಮನಾಭನಗರದ ಅಟಲ್‌ ಬಿಹಾರಿ ವಾಜಪೇಯಿ ಮೈದಾನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ‘ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರಸ್ತೆ ನಾಮಕರಣ’ ನೆರವೇರಿಸಿ ಅವರು ಮಾತನಾಡಿದರು.

ಒಂದೂವರೆ ವರ್ಷದ ಹಿಂದೆ ಆರಂಭಿಸಿದ ಅಂಬರೀಷ್ ಸ್ಮಾರಕವನ್ನು ಮಾರ್ಚ್‌ನಲ್ಲಿ ಉದ್ಘಾಟನೆ ಮಾಡಲಾಗುತ್ತದೆ. ಬಳಿಕ ರೇಸ್‌ಕೋರ್ಸ್ ರಸ್ತೆಗೆ ‘ರೆಬೆಲ್ ಸ್ಟಾರ್ ಅಂಬರೀಷ್’ ಹೆಸರಿಡಲಾಗುವುದು ಎಂದರು.
ಅಂಬರೀಷ್ ಕುದುರೆ ಮಾಲೀಕರಾಗಿದ್ದರು ಮತ್ತು ರೇಸ್‌ಕೋರ್ಸ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ರೇಸ್‌ಕೋರ್ಸ್, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಗಾಂಧಿನಗರ ಮೂರಕ್ಕೂ ರೇಸ್‌ಕೋರ್ಸ್ ರಸ್ತೆ ಜಂಕ್ಷನ್ ಆಗಿರುವುದರಿಂದ ಅಂಬರೀಷ್ ಹೆಸರಿಡಲಾಗುತ್ತಿದೆ ಎಂದು ಹೇಳಿದರು.

ಒಂದು ವೇಳೆ ಅಂಬರೀಷ್ ಇದ್ದಿದ್ದರೆ, ಅವನದೇ ಸ್ಟೈಲ್‌ನಲ್ಲಿ ಹೇಳುವುದಾದರೆ, ‘ನನ್ ಮಗನೆ ಕರೆಕ್ಟ್ ಆಗಿ ಹೆಸರು ಇಟ್ಟಿದಿಯಾ’ ಎನ್ನುತ್ತಿದ್ದ. ಅದಕ್ಕೆ ನಾನು ಕೂಡ ‘ಮಗನೆ ನೀನು ಏನೇನು ಮಾಡಿದ್ದೀಯಾ ಎಲ್ಲ ಗೊತ್ತಿದೆ, ಅದಕ್ಕಾಗಿ ಈ ಹೆಸರು ಇಡುತ್ತಿದ್ದೇನೆ’ ಎನ್ನುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net