

ಧಾರವಾಡ: ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಹೋಯ್ದಾಟಗಳು ನಿಮಗೆ ಗೊತ್ತೇ ಇವೆ. ಅಧಿಕಾರದಲ್ಲಿರುವ ಟಿಎಂಸಿ ಪಕ್ಷ ಮತ್ತು ವಿರೋಧ ಪಕ್ಷದಲ್ಲಿರುವ ಬಿಜೆಪಿಯ ನಡುವೆ ತೀವ್ರ ಕಿತ್ತಾಟ ನಡೆಯುತ್ತಲೇ ಇದೆ. ಎರಡೂ ಪಕ್ಷಗಳ ಕಾರ್ಯಕರ್ತರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಲೇ ಇವೆ.
ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ಶನಿವಾರ ಧಾರವಾಡದಲ್ಲಿ ಮಾತನಾಡಿದ ಅವರು, 'ತೃಣಮೂಲ ಕಾಂಗ್ರೆಸ್ ಪಕ್ಷವು ಸಿಪಿಐಎಂ ರೀತಿಯಲ್ಲಿಯೇ ಕೆಲಸ ಮಾಡುತ್ತಿದೆ. ಬೇರೆ ಪಕ್ಷದವರು ಬೆಳೆಯದಂತೆ ತಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ 130ಕ್ಕೂ ಹೆಚ್ಚು ನಮ್ಮ ಕಾರ್ಯಕರ್ತರನ್ನು ಕೊಂದು ಹಾಕಿದ್ದಾರೆ.' ಎಂದು ಹೇಳಿದರು.
ನಾವು ಟಿಎಂಸಿ ಪಕ್ಷವನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ. ಮಮತಾ ಬ್ಯಾನರ್ಜಿಯವರನ್ನು ಈ ಚುನಾವಣೆಯಲ್ಲಿ ಮುಗಿಸುತ್ತೇವೆ. ರಾಜಕೀಯವಾಗಿ ಅವರಿಗೆ ಅಂತ್ಯ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.