ಡ್ರಗ್ಸ್​ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್​ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆ

bharthi
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿನೊಂದಿಗೆ ಆರಂಭವಾದ ಬಾಲಿವುಡ್​ ಡ್ರಗ್ಸ್​ ಪ್ರಕರಣ ಹಲವಾರು ತಿರುವುಗಳನ್ನು ಪಡೆದುಕೊಂಡಿದೆ. ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್​ರಂತಹ ಪ್ರಸಿದ್ಧರನ್ನೂ ಸಹ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೋರ್ವ ಪ್ರಸಿದ್ಧ ಹಾಸ್ಯ ನಟಿ ಮತ್ತು ಆಕೆಯ ಪತಿಯನ್ನು ಎನ್​ಸಿಬಿ ವಿಚಾರಣೆಗೆ ವಳಪಡಿಸಿದೆ.

ಕಪಿಲ್​ ಶರ್ಮಾ ಕಾಮಿಡಿ ಶೋ ನೋಡಿದವರಿಗೆ ಭಾರ್ತಿ ಸಿಂಗ್​ ಅವರ ಪರಿಚಯವಿರುತ್ತದೆ. ತಮ್ಮ ಮಾತುಗಳಿಂದಲೇ ಎಲ್ಲರನ್ನೂ ನಗಿಸಬಲ್ಲ ಪ್ರತಿಭೆ ಇರುವ ನಟಿ ಅವರು. ಬಾಲಿವುಡ್​ ಸೇರಿ ದೇಶದ ಹಲವಾರು ಭಾಷೆಯ ಸಿನಿಮಾ ರಂಗದಲ್ಲೂ ಆಕೆಯ ಅಭಿಮಾನಿಗಳಿದ್ದಾರೆ. ಇದೀಗ ಅದೇ ನಟಿಯ ಸುತ್ತ ಡ್ರಗ್ಸ್​ ವಾಸನೆ ಸಿಕ್ಕಿರುವುದಾಗಿ ತಿಳಿಸಲಾಗಿದೆ.

ಶನಿವಾರ ಬೆಳಗ್ಗೆ ಭಾರ್ತಿ ಅವರ ಮನೆಯ ಮೇಲೆ ಎನ್​ಸಿಬಿ ದಾಳಿ ನಡೆಸಿದೆ. ಡ್ರಗ್ಸ್​ ಪೆಡ್ಲರ್​ ಒಬ್ಬರ ಬಾಯಿಯಲ್ಲಿ ಭಾರ್ತಿ ಅವರ ಪತಿ ಹರ್ಷ್​ ಅವರ ಹೆಸರು ಕೇಳಿಬಂದಿದೆ. ಅದೇ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಮನೆಯಲ್ಲಿ ಶೋಧ ನಡೆಸಿದಾಗ ಸಣ್ಣ ಪ್ರಮಾಣದ ಕನ್ನಾಬಿಸ್​ ಸಿಕ್ಕಿರುವುದಾಗಿ ತಿಳಿಸಲಾಗಿದೆ. ಆ ಕಾರಣ ದಂಪತಿಯನ್ನು ಎನ್​ಸಿಬಿ ತಮ್ಮ ಕಚೇರಿಗೆ ವಿಚಾರಣೆಗೆ ಕರೆದೊಯ್ದಿದೆ.

ಡ್ರಗ್ಸ್​ ಪ್ರಕರಣದಲ್ಲಿ ಈಗಾಗಲೇ ಸಾಕಷ್ಟು ನಟ ನಟಿಯರನ್ನು ಎನ್​ಸಿಬಿ ವಿಚಾರಿಸಿದೆ. ಈ ಹಿಂದೆ ಅರ್ಜುನ್​ ರಾಂಪಲ್​ ಅವರ ಮನೆಯಲ್ಲಿ ಶೋಧ ನಡೆಸಿ ಅವರನ್ನೂ ವಿಚಾರಣೆ ನಡೆಸಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net