

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ಭೈರಸಂದ್ರ ಗಲಭೆಯಲ್ಲಿ ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಶುಕ್ರವಾರ ಸದಾಶಿವ ನಗರದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು.
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಘಟನೆಯ ಆರೋಪಿ ಸಂಪತ್ ರಾಜ್ರನ್ನು ಪಕ್ಷದಿಂದ ಉಚ್ಛಾಟಿಸುಂತೆ ಈಗಾಗಲೇ ಹಲವು ಬಾರಿ ಡಿಕೆಶಿಗೆ ಮನವಿ ಮಾಡಿರುವ ಅಖಂಡ ಶ್ರೀನಿವಾಸ ಮೂರ್ತಿ, ಇದೀಗ ಮತ್ತೊಮ್ಮೆ ಅದೇ ಪ್ರಸ್ತಾಪ ಮುಂದಿಟ್ಟರು. ಆದರೆ, ಸಂಪತ್ ರಾಜ್ ಪರ ಬೆಂಬಲಕ್ಕೆ ನಿಂತ ಡಿಕೆಶಿ, ನ್ಯಾಯ ಕೊಡ್ಸಿ ಅಂತ ಬಂದ ಅಖಂಡಗೆ ಶಿಸ್ತು ಸಮಿತಿ ಕಡೆ ಬೆರಳು ತೋರಿಸಿ ನುಣುಚಿಕೊಂಡರು.
ಆರೋಪಿ ಮತ್ತು ಅಪರಾಧಿಗೆ ಬಹಳ ವ್ಯತ್ಯಾಸ ಇದೆ. ಆರೋಪ ಸಾಬೀತಾಗದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಶಿಸ್ತುಕ್ರಮ ತೆಗೆದುಕೊಳ್ಳುವುದು ನಾನಲ್ಲ, ಕೆಪಿಸಿಸಿ ಶಿಸ್ತು ಸಮಿತಿ. ಶಿಸ್ತು ಸಮಿತಿಯು ಪ್ರಕರಣ ಅಧ್ಯಯನ ಮಾಡಿ ನನಗೆ ಶಿಫಾರಸು ಮಾಡಲಿದೆ. ಕ್ರಮ ಕೈಗೊಳ್ಳುವ ಅಧಿಕಾರ ಶಿಸ್ತು ಸಮಿತಿಗಿದೆ ಎನ್ನುವ ಮೂಲಕ ಸಂಪತ್ರಾಜ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದರು.
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಮನೆ ಕಳೆದುಕೊಂಡ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ನ ಕೆಲ ನಾಯಕರ ವಿರುದ್ಧ ಪದೇಪದೆ ಅಸಮಾಧಾನ ಹೊರಹಾಕಿದ್ದಾರೆ. ಶುಕ್ರವಾರ ‘ದಿಗ್ವಿಜಯ ನ್ಯೂಸ್’ ಜತೆ ಮಾತನಾಡಿದ್ದ ಶಾಸಕರು, 'ನಾನು ಬೀದಿಗೆ ಬಂದಿರುವೆ, ನನ್ನ ಕೈ ಹಿಡಿಯಿರಿ…' ಎಂದು ಪಕ್ಷದ ಕೆಲ ನಾಯಕರಿಗೆ ಮನವಿ ಮಾಡಿದ್ದರು. 'ಈ ಪ್ರಕರಣದಲ್ಲಿ ಕೆಲ ನಾಯಕರು ನನಗೆ ಯಾವ ಕಾರಣಕ್ಕೆ ಸಪೋರ್ಟ್ ಮಾಡ್ತಿಲ್ಲ ಅನ್ನೋದು ಗೊತ್ತಿಲ್ಲ. ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡುವೆ. ಆಗಲೂ ಅವರು ಸಹಕಾರ ಕೊಡಲಿಲ್ಲ ಅಂದ್ರೆ ಈ ಸಂಬಂಧ ದೆಹಲಿಗೆ ಪತ್ರ ಬರೆಯುವ ಬಗ್ಗೆ ಚಿಂತನೆ ಮಾಡ್ತೀನಿ' ಎಂದಿದ್ದರು.
ಈ ಬಗ್ಗೆ ಶನಿವಾರ ಮಾತನಾಡಿದ ಈಶ್ಚರ್ ಖಂಡ್ರೆ, ಅಖಂಡ ಶ್ರೀನಿವಾಸ ಮೂರ್ತಿ ಪರ ನಾವಿದ್ದೇವೆ. ಕಾಂಗ್ರೆಸ್ ಪಕ್ಷವೂ ಇದೆ. ಅವರು ಈ ಪ್ರಕರಣದಿಂದ ನೊಂದಿದ್ದಾರೆ. ಸಂಪತ್ ರಾಜ್ ಸದ್ಯ ಆರೋಪಿಯಾಗಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ನಮ್ಮ ಶಿಸ್ತು ಸಮಿತಿ ನೋಡಿಕೊಳ್ಳುತ್ತೆ ಎಂದರು.