

ಬೆಂಗಳೂರು: ನಾನು ಬೀದಿಗೆ ಬಂದಿರುವೆ, ನನ್ನ ಕೈ ಹಿಡಿಯಿರಿ... ಎಂದು ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕೋರಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ಭೈರಸಂದ್ರ ಗಲಭೆಯಲ್ಲಿ ಮನೆ ಕಳೆದುಕೊಂಡ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಕಾಂಗ್ರೆಸ್ನ ಕೆಲ ನಾಯಕರ ವಿರುದ್ಧ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ. 'ದಿಗ್ವಿಜಯ ನ್ಯೂಸ್' ಜತೆ ಮಾತನಾಡಿದ ಶಾಸಕರು, ಈ ಪ್ರಕರಣದಲ್ಲಿ ಕೆಲ ನಾಯಕರು ನನಗೆ ಯಾವ ಕಾರಣಕ್ಕೆ ಸಪೋರ್ಟ್ ಮಾಡ್ತಿಲ್ಲ ಅನ್ನೋದು ಗೊತ್ತಿಲ್ಲ. ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡುವೆ. ಆಗಲೂ ಅವರು ಸಹಕಾರ ಕೊಡಲಿಲ್ಲ ಅಂದ್ರೆ ಈ ಸಂಬಂಧ ದೆಹಲಿಗೆ ಪತ್ರ ಬರೆಯುವ ಬಗ್ಗೆ ಚಿಂತನೆ ಮಾಡ್ತೀನಿ ಎಂದರು.
ಸಂಪತ್ ರಾಜ್ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಮನವಿ ಮಾಡಿದೆ. ಆದರೆ ಇಲ್ಲಿಯವರೆಗೂ ಉಚ್ಛಾಟನೆ ಮಾಡಿಲ್ಲ ಎಂದು ಡಿಕೆಶಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಅಖಂಡ ಶ್ರೀನಿವಾಸ ಮೂರ್ತಿ, ಜಾರ್ಜ್ ನಮ್ಮ ಪಕ್ಕದ ಕ್ಷೇತ್ರದವರು. ನನಗೆ ಸಹಕಾರ ಕೊಡುವಂತೆ ಅವರ ಬಳಿಯೂ ಮನವಿ ಮಾಡ್ತೀನಿ. ಡಾ.ಜಿ. ಪರಮೇಶ್ವರ ಅವರು ಈ ಬಗ್ಗೆ ಇಲ್ಲಿಯವರೆಗೆ ಏನೂ ಮಾತನಾಡಿಲ್ಲ ಎಂದರು.
ಈ ಘಟನೆ ನಡೆದ ಮೂರ್ನಾಲ್ಕು ದಿನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅಖಂಡ ಶ್ರೀನಿವಾಸಮೂರ್ತಿ, ಗಲಭೆ ನಡೆದು ಇಷ್ಟು ದಿನವಾದರೂ ಕೆಪಿಸಿಸಿ ಅಧ್ಯಕ್ಷರು ನನ್ನ ಮನೆಗೆ ಭೇಟಿ ನೀಡಿಲ್ಲ. ಕಾಂಗ್ರೆಸ್ನವರು ನನ್ನ ನೆರವಿಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಸುಟ್ಟು ಹೋಗಿರುವುದು ನಾನು ಬಾಳಿ ಬದುಕಿದ ಮನೆ, ಡಿ.ಕೆ.ಶಿವಕುಮಾರ್ ಅವರ ಮನೆ ಸುಟ್ಟಿಲ್ಲ. ಅವರು ನನ್ನ ಮನೆಯನ್ನು ಬಂದು ನೋಡಲಿ, ಆಮೇಲೆ ಮಾತನಾಡಲಿ ಎಂದು ಅಸಮಾಧಾನ ಹೊರಹಾಕಿದ್ದರು.
ಇದಾದ ಬಳಿಕವೂ ಪದೇಪದೆ ತನಗೆ ನ್ಯಾಯ ಕೊಡಿಸುವಲ್ಲಿ ಪಕ್ಷದ ಅಧ್ಯಕ್ಷರು ಸಹಕರಿಸುತ್ತಿಲ್ಲ ಎಂಬ ಅಸಮಾಧಾನಿತ ಮಾತುಗಳು ಅಖಂಡ ಶ್ರೀನಿವಾಸ ಮೂರ್ತಿ ಅವರಿಂದ ಬರುತ್ತಲೇ ಇವೆ.