ಡಿಜೆ ಹಳ್ಳಿ ಗಲಭೆ​: ಬೆಂಗಳೂರಿನ 43 ಕಡೆ ಏಕಕಾಲಕ್ಕೆ ಎನ್​ಐಎ ದಾಳಿ, ಮಾರಕಾಸ್ತ್ರ ಜಪ್ತಿ

DJhalli
DJhalli
Published on

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಬುಧವಾರ ಏಕಕಾಲಕ್ಕೆ ನಗರದ 43 ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿದೆ.

ನಾಲ್ಕು ಎಸ್​ಡಿಪಿಐ ಕಚೇರಿ ಮತ್ತು ಪಿಎಫ್​ಐ ಕಚೇರಿ ಸೇರಿದಂತೆ ಬೆಂಗಳೂರಿನ 43 ಕಡೆ ದಾಳಿ ನಡೆಸಿದ ಎನ್ಐಎ, ಹಲವು ಮಹತ್ವದ ದಾಖಲೆ ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ದೇಶದ ವಿವಿಧ ಎನ್ಐಎ ಬ್ರ್ಯಾಂಚ್​ನ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಎನ್​ಐಎ ದಾಳಿ ವೇಳೆ ಎಸ್​ಡಿಪಿಐ ಮತ್ತು ಪಿಎಫ್​ಐಗೆ ಸೇರಿದ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಲ ಸ್ಥಳಗಳಲ್ಲಿ ಚಾಕು, ಕಬ್ಬಿಣದ ರಾಡ್ ಸೇರಿ ವಿವಿಧ ಆಯುಧಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಕಳೆದ ಆಗಸ್ಟ್​ನಲ್ಲಿ ಸಂಭವಿಸಿದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ, ಪೊಲೀಸ್​ ಠಾಣೆ, ಅಂಗಡಿಗಳು ಸೇರಿದಂತೆ ಸಿಕ್ಕಸಿಕ್ಕ ವಾಹನಗಳ ಮೇಲೂ ಕಿಡಿಗೇಡಿಗಳ ಗುಂಪು ಮನಸೋ ಇಚ್ಛೆ ದಾಂಧಲೆ ನಡೆಸಿತ್ತು. ವಾಹನಗಳು-ಶಾಸಕರ ಮನೆಗೂ ಬೆಂಕಿ ಇಟ್ಟು ವಿಕೃತಿ ಮೆರೆದರು. ಪೊಲೀಸರು, ಪತ್ರಕರ್ತರ ಮೇಲೂ ಕಲ್ಲುತೂರಾಟ, ಬಾಟಲಿಗಳನ್ನು ಎಸೆದು ಇಡೀ ಏರಿಯಾವನ್ನೇ ಪ್ರಕ್ಷುಬ್ಧ ಸ್ಥಿತಿಗೆ ತಂದೊಡ್ಡಿದ್ದರು.

ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎನ್​ಐಎ, ಇದೀಗ ಎಸ್​ಡಿಪಿಐ ಮತ್ತು ಪಿಎಫ್​ಐ ಕಚೇರಿಗಳನ್ನು ಕೇಂದ್ರವಾಗಿರಿಸಿಕೊಂಡು ನಗರದ ಹಲವೆಡೆ ದಾಳಿ ನಡೆಸಿ ಪರಿಶೀಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net