

ಬೆಂಗಳೂರು: ಕಾಡುಗೊಂಡನಳ್ಳಿ (ಕೆ.ಜಿ.ಹಳ್ಳಿ) ಹಾಗೂ ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಗಲಭೆ ಮತ್ತು ಶಾಸಕ ಅಖಂಡ ಶ್ರೀನಿವಾಸ್ ಮನೆ ಧ್ವಂಸ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಸೋಮವಾರ ರಾತ್ರಿ ಬಂಧಿಸಿ, ಅಜ್ಞಾತ ಸ್ಥಳದಲ್ಲಿ ಇರಿಸಿದ್ದಾರೆ.
ಈ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಬಳಿಕ ಸಂಪತ್ ರಾಜ್ ಏನೇನು ಮಾಡಿದ್ದರು, ಏನೆಲ್ಲ ತಂತ್ರ ಪ್ರಯೋಗಿಸಿದ್ದರು ಎಂಬುದೇ ಕುತೂಹಲದ ವಿಷಯ. ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದಂತೆ ಕರೊನಾ ಸೋಂಕಿನ ನೆಪದಲ್ಲಿ ಸೆ. 14ರಂದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅ. 3ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಆದರೆ ಪ್ರಕರಣ ಉರುಳಾಗಲಿರುವುದು ಖಚಿತವಾಗುತ್ತಿದ್ದಂತೆ ಮರುದಿನವೇ ಮತ್ತೆ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ಬಳಿಕ ಅ. 14ರಂದು ಡಿಸ್ಚಾರ್ಜ್ ಆಗಿ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ನಡುವೆ ತಕ್ಷಣಕ್ಕೆ ಜಾಮೀನು ಸಿಗುವುದು ಕಷ್ಟ ಎಂದು ಅರಿತ ಸಂಪತ್, ಎಲ್ಲಿ ಪೊಲೀಸರು ಬಂಧಿಸುತ್ತಾರೋ ಎಂಬ ಭಯದಿಂದ ಅ. 16ರಂದು ಮತ್ತೆ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು.
ಸಂಪತ್ ಅವರ ಅಡ್ಮಿಟ್-ಡಿಸ್ಚಾರ್ಜ್ ನಾಟಕವನ್ನು ಗಮನಿಸಿದ ಸಿಸಿಬಿ ಪೊಲೀಸರು, ಸಂಪತ್ ಅವರನ್ನು ಡಿಸ್ಚಾರ್ಜ್ ಮಾಡುವುದಕ್ಕೂ ಮುನ್ನ ತಮಗೆ ಮಾಹಿತಿ ನೀಡಬೇಕು ಎಂದು ಆಸ್ಪತ್ರೆಗೆ ನೋಟಿಸ್ ನೀಡಿದ್ದರು. ಮತ್ತೊಂದೆಡೆ ಸಂಪತ್ ರಾಜ್ ಅಗತ್ಯ ಇರುವ ಆರೋಪಿ, ಅವರ ಬಂಧನ ಅತ್ಯಗತ್ಯ. ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರಣ ಅವರ ಆರೋಗ್ಯ ಪರಿಶೀಲಿಸಿ ವರದಿ ನೀಡುವಂತೆ ಮೆಡಿಕಲ್ ಬೋರ್ಡ್ಗೆ ಪೊಲೀಸ್ ಕಮಿಷನರ್ ಪತ್ರ ಬರೆದಿದ್ದರು. ವೈದ್ಯಾಧಿಕಾರಿಗಳು ಪರಿಶೀಲನೆ ಮಾಡುತ್ತಾರೆ, ನಂತರ ಸರ್ಕಾರಿ ವೈದ್ಯರ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಬಹುದು ಎಂಬ ಅಂದಾಜು ಸಿಗುತ್ತಿದ್ದಂತೆ ಸಂಪತ್ ರಾಜ್, ಅ. 23ರ ರಾತ್ರಿ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಪರಾರಿಯಾಗಿದ್ದರು.
ಸಂಪತ್ ರಾಜ್ ಪರಾರಿ ಆಗಿ ತಲೆಮರೆಸಿಕೊಂಡ ಬಳಿಕ ಅವರ ಮೊಬೈಲ್ ಫೋನ್ ಟವರ್ ಲೊಕೇಷನ್ ಜಾಡು ಹಿಡಿದ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಲು ಆರಂಭಿಸಿದ್ದರು. ಆದರೆ ಸಂಪತ್ ರಾಜ್ ಈ ಸುಳಿವು ತಿಳಿದು ಪದೇಪದೆ ತಾವಿದ್ದ ಸ್ಥಳ ಬದಲಿಸುತ್ತಿದ್ದರು.
ಪರಾರಿಯಾಗಿದ್ದ ಅಷ್ಟೂ ದಿನ ಒಂದೇ ಜಾಗದಲ್ಲಿ ಎರಡು ದಿನಗಳಿಂತ ಹೆಚ್ಚು ಕಾಲ ಇರದ ಸಂಪತ್, ಕರ್ನಾಟಕ, ಕೇರಳ, ತಮಿಳುನಾಡು ಸೇರಿ ಹಲವೆಡೆ ಓಡಾಡಿಕೊಂಡಿದ್ದರು. ಅದಾಗ್ಯೂ ಸೋಮವಾರ ಬೆಂಗಳೂರಿಗೆ ಮರಳಿ ಸಿಕ್ಕಿಬಿದ್ದಿದ್ದಾರೆ.