

ಬೆಂಗಳೂರು: ಈದ್ ಮಿಲದ್ ಮೆರವಣಿಗೆಯ ವೇಳೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಸಂಭವಿಸಿದ ಗಲಭೆಗೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಘಟನೆ ಬಗ್ಗೆ ಭಾರತದ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, "ಅಂದು ನಾಡ ವಿರೋಧಿ ಟಿಪ್ಪುವಿನ ವಿಜೃಂಭಣೆ ಇಂದು ರಾಷ್ಟ್ರ ವಿರೋಧಿ ಔರಂಗಜೇಬನ ವಿಜೃಂಭಣೆ, ಎತ್ತ ಸಾಗುತ್ತಿದೆ ಕರ್ನಾಟಕ? ಶಿವಮೊಗ್ಗದಲ್ಲಿ ನಡೆದ ಘಟನೆ ನೇರವಾಗಿ ರಾಜ್ಯ ಕಾಂಗ್ರೆಸ್ ಸರಕಾರ ಬೆಂಬಲವಾಗಿ ನಿಂತಿದೆ ಮತ್ತು ಕರ್ನಾಟಕವನ್ನು ಗೂಂಡಾರಾಜ್ಯ ಮಾಡಲು ಪಣತೊಟ್ಟಂತಿದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂಗಳ ಹಬ್ಬಕ್ಕೆ ನಿರ್ಬಂಧ, ಮತಾಂಧ ಶಕ್ತಿಗಳ ಅಟ್ಟಹಾಸಕ್ಕೆ(ಮೆರವಣಿಗೆಗೆ) ಬೆಂಬಲ. ಮತಾಂಧ ಶಕ್ತಿಗಳನ್ನು ಪೋಷಿಸಿ ಬೆಳೆಸಲೆಂದೇ ಅಧಿಕಾರಕ್ಕೆ ಬಂದ ಸರಕಾರವಿದು" ಎಂದು ಬರೆಯುವುದರ ಜತೆಗೆ ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ.