ಮಹಾತ್ಮ ಗಾಂಧಿ-ಶಾಸ್ತ್ರೀಜಿ ದೇಶ ಕಂಡ ಅಪ್ರತಿಮ ನಾಯಕರು: ಸಂಸದ ರಮೇಶ ಜಿಗಜಿಣಗಿ

GANDHI JAYANTI
ವಿಜಯಪುರದ ಗಾಂಧಿ ಭವನದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್‌ಪಿ ಋಷಿಕೇಶ ಸೋನಾವನೆ, ಪೀಟರ್ ಅಲೆಕ್ಸಾಂಡರ್ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಈ ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದು, ಇಂತಹ ಮಹಾನ್ ವ್ಯಕ್ತಿಗಳಲ್ಲಿರುವ ಪ್ರಾಮಾಣಿಕತೆ, ತ್ಯಾಗ, ನಿಷ್ಠೆಯಂತಹ ಉತ್ತಮ ಸಂದೇಶಗಳು, ತತ್ವಾದರ್ಶಗಳು ಹಾಗೂ ಜೀವನ ಮೌಲ್ಯಗಳನ್ನು ಮುಂದಿನ ಯುವಪಿಳಿಗೆಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆಗೆ ಚರಕದಲ್ಲಿ ನೂಲುವ ಮೂಲಕ, ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಈ ಮಹಾಪುರುಷರನ್ನು ಮರೆಯದೇ ಅವರ ಆದರ್ಶಮಯ ವಿಚಾರ ಧಾರೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯವ ಜವಾಬ್ದಾರಿ ಯುವಜನತೆ ಮೇಲಿದೆ. ಮಹಾನ್ ವ್ಯಕ್ತಿಗಳ ಕುರಿತು ಅರಿತುಕೊಂಡು ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಚಿಂತನೆಗಳ ಕುರಿತು ಅಧ್ಯಯನ ಮಾಡಬೇಕು. ಇಂತಹ ಜಯಂತಿ ಮೂಲಕ ಅವರನ್ನು ಸ್ಮರಿಸಿಕೊಳ್ಳಬೇಕೆಂದರು.

ಗಾಂಧೀಜಿಯವರ ದೃಷ್ಟಿಯಲ್ಲಿ ತ್ಯಾಗ ಮತ್ತು ಸೇವಾ ಮನೋಭಾವವೇ ಮಹತ್ವದ್ದಾಗಿತ್ತು. ಸತ್ಯ, ಧರ್ಮ, ನ್ಯಾಯ, ನಿಷ್ಠೆಗಳಿಂದ ಅಸಾಧಾರಣವಾದ ಗುರಿ ಮುಟ್ಟಲು ಸಾಧ್ಯವೆಂದು ಗಾಂಧೀಜಿಯವರು ನಂಬಿದ್ದು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಅವರು ನೀಡಿದ ಅಮೂಲ್ಯವಾದ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಬ್ರಿಟಿಷ್ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸುವಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದು, ತಮ್ಮ ಬದುಕು, ಸರ್ವಸ್ವವನ್ನೇ ದೇಶಕ್ಕೆ ಅರ್ಪಿಸಿ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹತ್ತರ ಪಾತ್ರವನ್ನು ವಹಿದವರು ಮಹಾತ್ಮ ಗಾಂಧಿ. ಅವರ ಸತ್ಯ, ಅಹಿಂಸೆ, ಸ್ವಚ್ಛತೆ, ಗ್ರಾಮ ಸ್ವರಾಜ್ಯದ ಕಲ್ಪನೆ ಮಾದರಿ ಎಂದರು.

ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಭಾರತದ ರಕ್ಷಣೆ ಮತ್ತು ಭದ್ರತಾ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು. ಅವರು ಸಣ್ಣ ವಯಸ್ಸಿಗೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಇವರು ಜೈ ಜವಾನ್ ಜೈಕಿಸಾನ್ ಘೋಷ ವಾಕ್ಯ ನೀಡಿ, ಸೈನಿಕರ ಹಾಗೂ ರೈತರ ಬಗೆಗೆ ಅಪಾರ ಕಳಕಳಿ ಹೊಂದಿದ್ದರು. ದೇಶ ಕಂಡ ಅಪ್ರತಿಮ ನಾಯಕರು ಎಂದರು.

ಜಿಲ್ಲೆಯಲ್ಲಿ ಮಾದರಿಯಾದ ಗಾಂಧಿ ಭವನ ನಿರ್ಮಾಣಗೊಂಡು ಇದೀಗ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಿಸಿ, ಮಹಾತ್ಮ ಗಾಂಧಿ ಅವರ ಬಗೆಗೆ ಮತ್ತಷ್ಟು ಮಾಹಿತಿ ಅರಿತುಕೊಳ್ಳಬಹುದಾಗಿದೆ ಎಂದು ಹೇಳಿದರು.

ಆಲಮಟ್ಟಿಯ ಎಂಎಚ್‌ಎಂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ ಗಾಳಪ್ಪಗೋಳ ಉಪನ್ಯಾಸ ನೀಡಿದರು. ಎಸ್‌ಪಿ ಋಷಿಕೇಶ ಸೋನಾವನೆ, ಎಡಿಸಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ವಿಜಯಪುರದ ಉಪವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಸಿ.ಕೆ. ಹೊಸಮನಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಕ್ರೀಡಾಧಿಕಾರಿ ಎಸ್ ಜಿ.ಲೋಣಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ, ಸುರೇಶ ಗೋಣಸಗಿ, ಪೀಟರ್ ಅಲೆಕ್ಸಾಂಡರ್, ಬಾಬುಗೌಡ ಪಾಟೀಲ, ನೀಲೇಶ ಬೇನಾಳ, ಅಡಿವೆಪ್ಪ ಸಲಗಲ್ಲ, ದೇವೇಂದ್ರ ಮಿರೇಕರ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ಗಿರೀಶ ಕುಲಕರ್ಣಿ, ಸಾವಿತ್ರಿ ದಳವಾಯಿ, ನಿವೃತ್ತ ಶಿಕ್ಷಕ ಎಚ್. ಮಮದಾಪುರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net