

ಭೋಪಾಲ್: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವೀಲ್ ಕುರ್ಚಿಯ ಮೇಲೆ ಕುಳಿತಿದ್ದನ್ನೇ ಹೆಚ್ಚಾಗಿ ನೋಡಿದ್ದ ಜನರು ಇದೀಗ ಆಕೆಯನ್ನು ನಿಬ್ಬೆರಗಾಗಿ ನೋಡುತ್ತಿದ್ದಾರೆ. ಒಳ್ಳೆಯ ಆಟಗಾರ್ತಿಯಂತೆ ಬಾಸ್ಕೆಟ್ ಬಾಲ್ ಆಡಿರುವ ಅವರ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಗುರುವಾರದಂದು ಪ್ರಜ್ಞಾ ಅವರು ಭೋಪಾಲ್‌ನಲ್ಲಿರುವ ಶಕ್ತಿ ನಗರ ಪ್ರದೇಶದ ಬಾಸ್ಕೆಟ್ ಬಾಲ್ ಅಂಕಣಕ್ಕೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿ ಸೇರಿದ್ದ ಆಟಗಾರರನ್ನು ನೋಡಿ ಸ್ಫೂರ್ತಿ ತೆಗೆದುಕೊಂಡ ಅವರು, ಬಾಲ್ ಅನ್ನು ಆಟವಾಡುತ್ತಾ ತೆಗೆದುಕೊಂಡು ಹೋಗಿ ಬಾಸ್ಕೆಟ್ ಒಳಗೆ ಹಾಕಿದ್ದಾರೆ. ಆಗ ಅವರೊಂದಿಗಿದ್ದ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳು ಚಪ್ಪಾಳೆ ತಟ್ಟಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಈ ವಿಡಿಯೋ ಬಗ್ಗೆ ಕಾಂಗ್ರೆಸ್ ನಾಯಕ ನರೇಂದ್ರ ಸಲೂಜಾ ಕೂಡ ಮಾತನಾಡಿದ್ದಾರೆ. ಪ್ರಜ್ಞಾ ಅವರು ಗಾಲಿ ಕುರ್ಚಿಯಲ್ಲಿ ಕುಳಿತಿದ್ದನ್ನು ನೋಡಿದ್ದೆ. ಆದರೆ ಅವರು ಈಗ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿದ್ದಾರೆ. ಇದನ್ನು ನೋಡಿ ಸಂತೋಷವಾಗಿದೆ. ನನಗಿರುವ ಮಾಹಿತಿಯ ಪ್ರಕಾರ ಅವರು ಯಾವುದೋ ಒಂದು ಗಾಯದ ಕಾರಣದಿಂದಾಗ ಸರಿಯಾಗಿ ನಿಲ್ಲಲು ಮತ್ತು ನಡೆಯಲು ಸಾಧ್ಯವಿರಲಿಲ್ಲ. ದೇವರು ಅವರಿಗೆ ಯಾವಾಗಲೂ ಆರೋಗ್ಯ ಕರುಣಿಸಲಿ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ. (ಏಜೆನ್ಸೀಸ್)