ಬಾಕ್ಸ್​ ಆಫೀಸ್​ನಲ್ಲಿ ಮೈಲಿಗಲ್ಲು ತಲುಪಿದ ಪ್ರಭಾಸ್​ ಕಲ್ಕಿ! ಸೈನ್ಸ್​-ಫಿಕ್ಷನ್​ ಚಿತ್ರಕ್ಕೆ ಫ್ಯಾನ್ಸ್​ ಫಿದಾ

ವಿಜಯವಾಣಿ-2024-07-08T155849.551
Published on

ಹೈದರಾಬಾದ್: ಜಾಗತಿಕವಾಗಿ ಜೂ. 27ರಂದು ಬಹುತೇಕ ಚಿತ್ರಮಂದಿಗಳಲ್ಲಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್​ ಸ್ಟಾರ್​, ನಟ ಪ್ರಭಾಸ್​ ಅಭಿನಯದ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಚಿತ್ರ ಇದೀಗ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಮೊದಲ ದಿನವೇ ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ಇದೀಗ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.

ಇತ್ತೀಚಿಗಷ್ಟೇ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ 800 ಕೋಟಿ ರೂ. ಗಳಿಕೆ ಕಂಡಿದ್ದ ಕಲ್ಕಿ, ಇಂದು 1000 ಕೋಟಿ ರೂ. ಕ್ಲಬ್ ಸೇರುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಟಾಲಿವುಡ್​ನ ‘ಬಾಹುಬಲಿ’, ‘ಆರ್​ಆರ್​ಆರ್’ ಸಿನಿಮಾಗಳ ಪೈಕಿ ಈ ದಾಖಲೆ ಬರೆದ ಮೂರನೇ ಸಿನಿಮಾ ಇದಾಗಿದೆ. ಸದ್ಯ ಬಾಕ್ಸ್​ ಆಫೀಸ್​​ನಲ್ಲಿ ಮಿಂಚಿನ ಓಟ ಮುಂದುವರೆಸಿರುವ ಸೈನ್​-ಫಿಕ್ಷನ್ ಆಧರಿತ ಚಿತ್ರಕ್ಕೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ.

ಇದರೊಟ್ಟಿಗೆ ಉತ್ತರ ಅಮೆರಿಕಾದಲ್ಲಿ 16 ಮಿಲಿಯನ್ ಡಾಲರ್ ಕಲೆಕ್ಷನ್​ ತಲುಪಿರುವ 'ಕಲ್ಕಿ', ಅತಿ ಹೆಚ್ಚು ಹಣ ಗಳಿಸಿದ ದಕ್ಷಿಣ ಭಾರತದ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ. ಕೇವಲ ಬುಕ್​ ಮೈಶೋ ಟಿಕೆಟ್​ ಪೋರ್ಟಲ್​ನಲ್ಲಿಯೇ ಒಂದು ಕೋಟಿ ಟಿಕೆಟ್ ಮಾರಾಟವಾಗಿದೆ. ಚಿತ್ರದಲ್ಲಿ ಪ್ರಭಾಸ್​, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ರಾಜೇಂದ್ರ ಪ್ರಸಾದ್, ಅಮಿತಾಬ್ ಬಚ್ಚನ್, ದಿಶಾ ಪಟಾನಿ ಸೇರಿದಂತೆ ಮುಂತಾದವರ ತಾರಾಗಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net