

ನವದೆಹಲಿ: ಪ್ರಸ್ತುತ ಹರಾರೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿಯಲ್ಲಿ ತೊಡಗಿರುವ ಟೀಮ್ ಇಂಡಿಯಾ, ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದೇ ಆದರೂ ನಿನ್ನೆ (ಜು.07) ನಡೆದ ಎರಡನೇ ಅಂತಾರಾಷ್ಟ್ರೀಯ ಮ್ಯಾಚ್ನಲ್ಲಿ 100 ರನ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದು ಯುವ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮರ ಆಕರ್ಷಕ ಇನ್ನಿಂಗ್ಸ್.
ಕ್ರಿಕೆಟ್ಗೆ ಈಗ ತಾನೇ ಅಂಬೇಗಾಲು ಹಾಕುತ್ತಿರುವ ಜಿಂಬಾಬ್ವೆ, ಐದು ಟಿ20 ಸರಣಿಗಾಗಿ ತಮ್ಮೂರಿಗೆ ಪ್ರಯಾಣ ಬೆಳೆಸಿದ ಯುವ ಭಾರತ ತಂಡವನ್ನು ಮೊದಲ ಪಂದ್ಯದಲ್ಲೇ ಸೋಲಿಸಿದ್ದು ಟೀಮ್ ಇಂಡಿಯಾದ ಆಟಗಾರರಿಗೆ ಮತ್ತು ಮಾಜಿ ಕ್ರಿಕೆಟಿಗರಿಗೆ ಭಾರೀ ಬೇಸರ ಮೂಡಿಸಿತ್ತು. ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರೀ ಅಂತರದಲ್ಲಿ ಗೆದ್ದ ಟೀಮ್ ಇಂಡಿಯಾಗೆ ಹೊಸ ಹುರುಪು ನೀಡಿದ್ದು ಅಭಿಷೇಕ್ ಶರ್ಮ. ತಂಡದಲ್ಲಿ ಅಕ್ಷರಶಃ ಮಿಂಚಿದ್ದು ಕೇವಲ ಅಭಿಷೇಕ್ ಸ್ಫೋಟಕ ಶತಕ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಎರಡನೇ ಪಂದ್ಯದಲ್ಲೇ ದಾಖಲೆಯ ಶತಕದೊಂದಿಗೆ ಎಲ್ಲರ ಗಮನ ಸೆಳೆದ ಅಭಿಷೇಕ್, ತಮ್ಮ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೆಂಚುರಿ ದಾಖಲಿಸುವ ಮೂಲಕ ಹೊಸ ಇತಿಹಾಸ ಬರೆದರು. ಯುವ ಬ್ಯಾಟ್ಸ್ಮನ್ ಅಬ್ಬರವನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು, ಇವರ ಬ್ಯಾಟಿಂಗ್ ಸ್ಟ್ರೈಲ್ ವಿಶ್ವಕಪ್ ಹೀರೋ ರೋಹಿತ್ ಶರ್ಮ ಅವರನ್ನು ಹೋಲುತ್ತಿದೆ ಎಂದು ಅಭಿಪ್ರಾಯಿಸಿದರು.
ಕೇವಲ 47 ಎಸೆತಗಳಲ್ಲಿ 100 ರನ್ ಸಿಡಿಸಿದ ಅಭಿಷೇಕ್, ಕೆಲವೊಂದು ಶಾಟ್ಗಳನ್ನು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ, ತಮ್ಮ ಗುರು ಯುವರಾಜ್ ಸಿಂಗ್ರಂತೆ ಬಾರಿಸಿದರು. ಇದು ನೋಡುಗರಲ್ಲಿ ಅನೇಕ ರೀತಿಯ ಅಭಿಪ್ರಾಯಗಳು ಮೂಡುವಂತೆ ಮಾಡಿತು. ಒಟ್ಟಾರೆ ಅಭಿಷೇಕ್ ಇನ್ನಿಂಗ್ಸ್ಗೆ ತಲೆಬಾಗಿದ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದು ಭಾರೀ ಅಚ್ಚರಿ ಮೂಡಿಸಿದೆ.
ಅಸಲಿಗೆ ಅಭಿಷೇಕ್ ಶರ್ಮ ಸಿಡಿಸಿದ ಶತಕ ಅವರ ಬ್ಯಾಟ್ನಿಂದ ಬಂದಿದ್ದಲ್ಲ ಎಂಬ ಸಂಗತಿ ಸದ್ಯ ಅನೇಕರಲ್ಲಿ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಐಪಿಎಲ್ 17ನೇ ಆವೃತ್ತಿ ಹಿಡಿದು, ನಿನ್ನೆ ನಡೆದ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯದವರೆಗೂ ಅವರು ಬಳಸಿರುವ ಬ್ಯಾಟ್ ಅವರದ್ದಲ್ಲ. ಬದಲಿಗೆ ಟೀಮ್ ಇಂಡಿಯಾದ ಒಬ್ಬ ಸ್ಟಾರ್ ಕ್ರಿಕೆಟಿಗನದ್ದು ಎಂಬ ವಿಚಾರ ಇದೀಗ ಎಲ್ಲರ ಹುಬ್ಬೇರಿಸಿದೆ.
ಅಭಿಷೇಕ್ ಶರ್ಮ ಕ್ರೀಸ್ಗೆ ಬಂದಾಗ ಅವರ ಕೈಯಲ್ಲಿರುವ ಬ್ಯಾಟ್ ಕ್ಯಾಪ್ಟನ್ ಶುಭಮನ್ ಗಿಲ್ ಅವರದ್ದು! ಈ ಕುರಿತು ಸ್ವತಃ ಅಭಿಷೇಕ್ ಅವರೇ ಪಂದ್ಯ ಮುಗಿದ ಬಳಿಕ ಹೇಳಿಕೊಂಡಿದ್ದಾರೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರವಾಗಿಯೂ ಇದೇ ಬ್ಯಾಟ್ನಲ್ಲಿ ಆಡಿದ್ದು, ಈಗ ಈ ಸರಣಿಯನ್ನು ಕೂಡ ಇದರಲ್ಲೇ ಆಡುತ್ತಿರುವೆ ಎಂದು ಹೇಳಿದ್ದಾರೆ. ಇದನ್ನು ಗಮನಿಸಿದ ಫ್ಯಾನ್ಸ್, ಬಹುಶಃ ಇದು ನಿಮಗೆ ಲಕ್ಕಿ ಬ್ಯಾಟ್ ಎಂಬಂತೆ ತೋರುತ್ತಿದೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ವ್ಯಾಪಕವಾಗಿ ಅಭಿಪ್ರಾಯಿಸಿದ್ದಾರೆ.