

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಅಟಗಾರ, ದಾಖಲೆಗಳ ಸರದಾರ, ರನ್ ಮಷಿನ್ ವಿರಾಟ್ ಕೊಹ್ಲಿ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಬ್ರ್ಯಾಂಡ್ ಸ್ಥಾಪಿಸಿರುವ ವಿರಾಟ್, ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಂದೆಡೆ ತಂಡಕ್ಕೆ ಗೆಲುವಿನ ರೂವಾರಿಯಾದ ಕೊಹ್ಲಿ, ಮತ್ತೊಂದೆಡೆ ವಿಶ್ವಕಪ್ ಗೆಲ್ಲುತ್ತಿದ್ದಂತೆ ಟಿ20 ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದರು.
ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಟೀಮ್ ಇಂಡಿಯಾ ಗುರುವಾರ (ಜು.04) ದೆಹಲಿಗೆ ಮರಳಿತು. ವಿಶ್ವಕಪ್ ಗೆದ್ದ ಹೀರೋಗಳಿಗೆ ಕೇವಲ ಬಿಸಿಸಿಐನಿಂದ ಮಾತ್ರವಲ್ಲದೇ ದೇಶದ ಜನತೆಯಿಂದ ವಿಶೇಷ ಗೌರವ, ಸನ್ಮಾನ ಮತ್ತು ಬಹುಮಾನಗಳೇ ಹರಿದುಬಂದಿತು. 17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಆಟಗಾರರಿಗೆ ಪ್ರಧಾನಿ ಮೋದಿಯವರಿಂದಲೂ ವಿಶೇಷ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಯಿತು. ಈ ಮಧ್ಯೆ ತನ್ನನ್ನು ಸಂಭ್ರಮಿಸುತ್ತಿರುವ ಅಪಾರ ಸಂಖ್ಯೆಯೇ ಅಭಿಮಾನಿಗಳಿಗೆ ತಲೆಬಾಗಿದ ವಿರಾಟ್, ಹೆಚ್ಚಾಗಿ ಆಧ್ಯಾತ್ಮದ ಕಡೆ ವಾಲುತ್ತಾರೆ ಎಂಬ ಸಂಗತಿ ಅನೇಕರಿಗೆ ತಿಳಿದೇ ಇಲ್ಲ.
ಕ್ರಿಕೆಟ್ಗೆ ಬರುವ ಮೊದಲಿನಿಂದಲೂ ಕೂಡ ವಿರಾಟ್ ದೇವರ ಅಪ್ಪಟ ಭಕ್ತರು. ಆಧ್ಯಾತ್ಮಿಕವಾಗಿಯೂ ಅವರು ಹತ್ತಿರವಾಗಿದ್ದಾರೆ. ಇದಕ್ಕೆ ಸಾಕ್ಷಿ ಅವರ ಫೋನ್ನಲ್ಲಿರುವ ನೀಮ್ ಕರೋಲಿ ಬಾಬಾ ಅವರ ವಾಲ್ಪೇಪರ್. ಅಸಲಿಗೆ ಯಾರು ಇವರು? ಇವರ ಫೋಟೋ ಏಕೆ ಕೊಹ್ಲಿ ಫೋನ್ನ ವಾಲ್ನಲ್ಲಿದೆ ಎಂಬ ಪ್ರಶ್ನೆ ಮೂಡುವುದು ಸಹಜ! ಇದಕ್ಕೆ ಉತ್ತರ, ಆಧ್ಯಾತ್ಮದಲ್ಲಿ 'ರನ್ ಮಷಿನ್' ಅವರಿಗಿರುವ ನಂಬಿಕೆ. ಈ ಹಿಂದೆ ಕರೋಲಿ ಬಾಬಾ ಅವರನ್ನು ವಿರಾಟ್ ಕೊಹ್ಲಿ ಭೇಟಿಯಾಗಿದ್ದರು. ಅದಾದ ಬಳಿಕ ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶತಕ ಬಾರಿಸಿದ್ದರು. ಇದೆಲ್ಲವೂ ಗುರುಗಳ ಆಶಿರ್ವಾದ ಎಂದೇ ನಂಬಲಾಗಿದೆ.
ನೀಮ್ ಕರೋಲಿ ಬಾಬಾರನ್ನು ಭಾರತದಲ್ಲಿ ಪ್ರಸಿದ್ಧ ಮತ್ತು ಗೌರವಾನ್ವಿತ ಮಾಸ್ಟರ್ ಎಂದೇ ಜನರು ಕರೆಯುತ್ತಾರೆ. ತಮ್ಮ ಆಶ್ರಮದಲ್ಲಿ ಬೋಧನೆಗಳ ಮೂಲಕ ಅನೇಕರ ಜೀವನದ ಮೇಲೆ ಭಾರಿ ಪರಿಣಾಮ ಬೀರಿದ್ದಾರೆ. ನೀಮ್ ಕರೋಲಿ ಬಾಬಾ ಅವರ ಮೂಲ ಹೆಸರು ಲಕ್ಷ್ಮಣ್ ನಾರಾಯಣ ಶರ್ಮಾ. ಇವರು ಪ್ರಪಂಚದಾದ್ಯಂತದ ಪ್ರಸಿದ್ಧ ವ್ಯಕ್ತಿಗಳಿಗೆ ಆಧ್ಯಾತ್ಮಿಕತೆಯನ್ನು ಕಲಿಸಿದ್ದಾರೆ ಎಂದು ಹೇಳಲಾಗಿದೆ. ಕರೋಲಿ ಅವರನ್ನು ಗುರು ಎಂದು ಆರಾಧಿಸುವ ವಿರಾಟ್, ತಮ್ಮ ಕುಟುಂಬದವರೊಂದಿಗೆ ಆಗಾಗ್ಗೆ ಬಾಬಾರ ಆಶ್ರಮಕ್ಕೆ ಭೇಟಿ ನೀಡುತ್ತಾರೆ.
ನೈನಿತಾಲ್‌ನಲ್ಲಿರುವ ನೀಮ್ ಕರೋಲಿ ಬಾಬಾ ಅವರ ಆಶ್ರಮದಲ್ಲಿ ವಿರಾಟ್ ದಂಪತಿಗಳು ದಾನ ಕಾರ್ಯಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದ್ದು, ಇದು ವಿರಾಟ್ಗೆ ಆಧ್ಯಾತ್ಮಿಕದತ್ತ ಒಲವು ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ನೀಮ್ ಕರೋಲಿ ಬಾಬಾ ಅವರ ಎರಡೂ ಆಶ್ರಮಗಳಿಗೆ ಭೇಟಿ ನೀಡಿರುವ ಕೊಹ್ಲಿ, ಗುರೂಜಿಯನ್ನು ಬಲವಾಗಿ ನಂಬುತ್ತಾರೆ ಎಂಬ ಮಾತಿದೆ,(ಏಜೆನ್ಸೀಸ್).