

ಹೈದರಾಬಾದ್: ಈ ಹಿಂದಿನಿಂದಲೂ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿರುವ ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣ ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಇದೇ ಜೂನ್ 27ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇದರ ಮಧ್ಯೆ ಇತ್ತೀಚೆಗಷ್ಟೇ ಚಿತ್ರತಂಡ ಬುಜ್ಜಿ ಕಾರನ್ನು ಪರಿಚಯಿಸಿದ ರೀತಿ ಹಾಗೂ ರಿಲೀಸ್ ಮಾಡಿದ ಟ್ರೇಲರ್ ನೋಡಿ ಚಿತ್ರರಸಿಕರು ಫಿದಾ ಆಗಿದ್ದಾರೆ. ಆದರೆ, ಇದೀಗ ಚಿತ್ರದ ರನ್ಟೈಮ್ ಅವಧಿ ಕೇಳಿ ದಂಗಾಗಿದ್ದು, ಇಷ್ಟೊತ್ತು ಕುಳಿತು ಯಾರು ಸಿನಿಮಾ ನೋಡ್ತಾರೆ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.
ಬಹುನಿರೀಕ್ಷಿತ ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಇದೇ ಜೂ. 27ರಂದು ತೆರೆಕಾಣುತ್ತಿದ್ದು, ಈ ವಿಷಯ ಸದ್ಯ ಪ್ರಭಾಸ್ ಫ್ಯಾನ್ಸ್ಗಳ ಕಾತರವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಈ ಮಧ್ಯೆ ನಾಯಕ ನಟ ಪ್ರಭಾಸ್ ಮತ್ತು ನಾಯಕಿ ದೀಪಿಕಾ ಪಡುಕೋಣೆ ಲುಕ್ಗಳನ್ನು ನೋಡಿದ ಸಿನಿಪ್ರೇಕ್ಷಕರು ಫಿದಾ ಆಗಿದ್ದು, ಸೈನ್-ಫಿಕ್ಷನ್ ಚಿತ್ರವನ್ನು ಚಿತ್ರಮಂದಿರದಲ್ಲೇ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಚಿತ್ರದ ತಯಾರಕರು ಸಿನಿಮಾದ ರನ್ಟೈಮ್ ಅವಧಿಯನ್ನು ಬಿಡುಗಡೆಗೊಳಿಸಿದ್ದು, 3 ಗಂಟೆ 56 ನಿಮಿಷ ಎಂದು ತಿಳಿಸಲಾಗಿದೆ.
ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದ ರನ್ಟೈಮ್ ಅಧಿಕೃತ ಎಂದು ಹೇಳಲಾಗಿದ್ದು, ಸದ್ಯ ಮಾಹಿತಿ ತಿಳಿದ ಸಿನಿಪ್ರಿಯರು ಭಾರೀ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಹೇಗೆ ಸಾಧ್ಯ? 2 ಗಂಟೆ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡುವುದು ಕಷ್ಟಸಾಧ್ಯ ಎಂದು ಕೆಲವರು ಅಭಿಪ್ರಾಯಿಸಿದರೆ, ಇನ್ನೂ ಕೆಲವರು ಚಿತ್ರದ ಕಥಾಹಂದರ, ದೃಶ್ಯಗಳು 3 ಗಂಟೆಗೂ ಹೆಚ್ಚು ಅವಧಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು ಎಂದು ತಮ್ಮ ತಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿದ್ದಾರೆ. ಸಿನಿಮಾ ತೆರೆಕಂಡ ಬಳಿಕ ಇದೆಲ್ಲವೂ ಯಾವ ರೀತಿ ಪರಿಣಾಮ ಬೀರಲಿದೆ? ಚಿತ್ರ ಬಾಕ್ಸ್ ಆಫೀಸ್ ಕಮಾಲ್ ಮಾಡಲಿದ್ಯಾ? ಎಂಬುದನ್ನು ಕಾದು ನೋಡಬೇಕಿದೆ.
ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಮುಂತಾದವರ ತಾರಾಗಣವಿದೆ. ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).