ಕರೊನಾ ಸೂತಕದಲ್ಲಿ ಅಧಿಕಾರದ ಚಿಂತೆ!

bjp power
Published on

ಬೆಂಗಳೂರು: ಕರೊನಾ ಮಹಾಮಾರಿಯನ್ನು ಮಟ್ಟಹಾಕಲು ಮುಖ್ಯಮಂತ್ರಿಯಾದಿಯಾಗಿ ಇಡೀ ಸರ್ಕಾರ ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದರೆ ಅತ್ತ ಅದೇ ಆಡಳಿತಾರೂಢ ಬಿಜೆಪಿಯ ಕೆಲವು ಶಾಸಕರು ಸ್ಥಾನಮಾನಕ್ಕಾಗಿ ಪ್ರತ್ಯೇಕತೆಯ ಬಾವುಟ ಹಾರಿಸಿರು ವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಂದಿಗ್ಧತೆಯ ಸಮಯದಲ್ಲಿ ಕೆಲವು ಕಮಲ ಶಾಸಕರು ತೆಗೆದಿರುವ ಈ ಒಡಕು ಧ್ವನಿ ಜನಾಕ್ರೋಶಕ್ಕೆ ಕಾರಣವಾಗಿದೆ.

ಸಂಪುಟ ವಿಸ್ತರಿಸಿ ತಮಗೆ ಮಣೆಹಾಕಬೇಕು, ರಾಜ್ಯಸಭೆ ಯಲ್ಲಿ ತಾವು ಹೇಳಿದವರಿಗೇ ಅವಕಾಶ ನೀಡಬೇಕು, ಸರ್ಕಾರದಲ್ಲಿ ನಮಗೆ ಪ್ರಾತಿನಿಧ್ಯ ಸಿಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗುರುವಾರ ರಾತ್ರಿ ಸಭೆ ಸೇರಿದ್ದ ಉಮೇಶ್ ಕತ್ತಿ ನೇತೃತ್ವದ ತಂಡಕ್ಕೆ ಪ್ರತಿಯಾಗಿ ಬಲ ಪ್ರದರ್ಶನ ನಡೆಸುವುದಕ್ಕೂ ಬಿಜೆಪಿಯಲ್ಲಿ ವೇದಿಕೆ ಸಜ್ಜಾಗಿದೆ.

ಸಿಎಂ ಬೆನ್ನಿಗೆ ನಿಂತಿರುವ ಹಲವು ಶಾಸಕರು ‘ನಿಮ್ಮೊಂದಿಗೆ ನಾವಿದ್ದೇವೆ’ಎಂದು ಬೆಂಬಲ ಸಾರಿದ್ದಾರೆ. ಜತೆಗೆ ಕತ್ತಿ ಜತೆಗೆ ನಿಂತಿದ್ದ ಕೆಲವು ಶಾಸಕರು ಈಗ ನಾಲ್ಕು ಹೆಜ್ಜೆ ಹಿಂದಿಟ್ಟಿದ್ದಾರೆ. ಬಿಜೆಪಿಗೆ ವಲಸೆ ಬಂದ ರಮೇಶ್ ಜಾರಕಿಹೊಳಿ ಅವರಂತೂ ಕಾಂಗ್ರೆಸ್​ನ ಹಲವು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆನ್ನುವ ಮೂಲಕ ‘ಕತ್ತಿ’ ವರಸೆಗೆ ಪ್ರತಿಯಾಗಿ ‘ಗುರಾಣಿ’ ಹಿಡಿದಿದ್ದಾರೆ.

ದಿನದ ಬೆಳವಣಿಗೆಯಲ್ಲಿ ಬಸನಗೌಡ ಯತ್ನಾಳ್ ಸಿಎಂ ವಿರುದ್ಧ ಹರಿಹಾಯ್ದರು. ಯಡಿಯೂರಪ್ಪ ಸಿಎಂ ಅಷ್ಟೇ ಎಂದು ತಮ್ಮೊಳಗಿನ ಸಿಟ್ಟು ಹೊರಹಾಕಿದರು. ಉಮೇಶ್ ಕತ್ತಿ ತಾವು ಸಭೆ ನಡೆಸಿದ ಉದ್ದೇಶದ ಬಗ್ಗೆ ಹೇಳಿಕೆ ನೀಡಿದರೆ ಹತ್ತು ಹಲವು ಸಚಿವಾಕಾಂಕ್ಷಿಗಳು ಅವಕಾಶ ಸಿಕ್ಕರೆ ನಾವು ರೆಡಿ ಎಂಬ ಅನಿಸಿಕೆ ಹೊರಹಾಕಿದರು.

‘ಕತ್ತಿ’ ವರಸೆಯಿಂದ ಚಿಂತಿತರಾಗಿ ಬಿಎಸ್​ವೈ ಸಭೆ ಕರೆದಿದ್ದಾರೆಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ‘ನಾನು ಅಂಥ ಯಾವುದೇ ಸಭೆ ಕರೆದಿಲ್ಲ ’ಎಂದು ಸ್ಪಷ್ಟಪಡಿಸುವ ಮೂಲಕ ಸಿಎಂ ಗೊಂದಲಗಳಿಗೆ ತೆರೆ ಎಳೆದರು.

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ‘ನಮಗೂ ಸಭೆ ಸೇರಿಸುವುದು ಗೊತ್ತಿದೆ’ ಎಂದು ಅವರದೇ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದರು. ಬಳಿಕ ಒಬ್ಬೊಬ್ಬರಾಗಿ ಹೇಳಿಕೆ ಕೊಟ್ಟರೇ ವಿನಃ ಯತ್ನಾಳ್ ಹೊರತುಪಡಿಸಿ ಉಳಿದವರೆಲ್ಲರ ಮಾತುಗಳು ಒಂದೇ ದಾಟಿ ಹಿಡಿಯಲಿಲ್ಲವಾಯಿತು. ಮಧ್ಯಾಹ್ನದವರೆಗೆ ನಡೆದ ಈ ಹೈಡ್ರಾಮಾವನ್ನು ವೀಕ್ಷಿಸುತ್ತಿದ್ದ ಸಾರ್ವಜನಿಕರು ಕರೊನಾ ಸಂದರ್ಭದಲ್ಲಿ ಇದೆಲ್ಲ ಬೇಕಿತ್ತೇ? ಎಂದು ಸಾಮಾಜಿಕ ಜಾಲತಾಣಗಳ ಮುಖೇನ ದನಿ ಎತ್ತಿದ್ದಾರೆ. ಈ ನಡುವೆ ಬಿಎಸ್​ವೈ ಕೆಳಗಿಳಿಸುವ ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಯತ್ನಾಳ್ ಕೆಲವು ನಾಯಕರ ಬಳಿ ಮಾತನಾಡಿದ್ದಾರೆಂದು ಗೊತ್ತಾಗಿದೆ. ಆದರೆ ಈ ಕೋರಿಕೆಗೆ ನಾಯಕರ್ಯಾರೂ ಸೊಪ್ಪು ಹಾಕಿಲ್ಲ ಎನ್ನಲಾಗಿದೆ.

ಕೈಹಿಂಡಿದ ರಮೇಶ್

‘ಇಪ್ಪತ್ತೆರಡು ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದು, ಟ್ರಯಲ್ ಬೇಸ್ ಆಗಿ ಐದು ಮಂದಿ ಶಾಸಕರ ರಾಜೀನಾಮೆ ಕೊಡಿಸಲು ಸಿದ್ಧ’ ಎಂದು ಸಚಿವ ರಮೇಶ್ ಜಾರಕಿಹೊಳಿ ಸಿಡಿಸಿರುವ ಬಾಂಬ್ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಬಿಜೆಪಿ ಹೈಕಮಾಂಡ್ ಅನುಮತಿ ನೀಡಿದರೆ ವಾರದೊಳಗೆ ಅವರ ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರ್ಪಡೆಗೊಳಿಸುವೆ. ನಾನು ಮುಖ್ಯಮಂತ್ರಿ ಯಡಿಯೂರಪ್ಪ ಪರ ಇದ್ದೇನೆ. ಬಿಜೆಪಿ ಸರ್ಕಾರ ಸೇಫ್ ಆಗಿದ್ದು, ಯಾವುದೇ ಭಿನ್ನಮತ ಇಲ್ಲ . ಉಮೇಶ್ ಕತ್ತಿ ನನ್ನ ಸ್ನೇಹಿತರು, ನಿನ್ನೆ ದೂರವಾಣಿಯಲ್ಲಿ ರ್ಚಚಿಸಿದರು. ಚರ್ಚೆ ಮಾಡುವುದು ಭಿನ್ನಮತ ಅಲ್ಲ. ಅವರಿಗೆ ಯಾವ ರೀತಿ ಅಸಮಾಧಾನ ಆಗಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿ ಮೂರು ವರ್ಷ ಅಷ್ಟೇ ಅಲ್ಲ, ಅದರ ಮುಂದಿನ ಐದು ವರ್ಷವೂ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ರಮೇಶ್ ಹೇಳಿದರು.

ಒಡಕು ದನಿಗೆ ಕಾರಣ

ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಪಡೆದುಕೊಳ್ಳುವ ಒತ್ತಡ ತಂತ್ರ

ಯತ್ನಾಳ್ ಸೇರಿ ಹಲವು ಶಾಸಕರಿಗೆ ಸರ್ಕಾರದಲ್ಲಿ ಪ್ರಾಧಾನ್ಯ ಸಿಗುತ್ತಿಲ್ಲ

ಒಂದು ವೇಳೆ ಸಂಪುಟ ವಿಸ್ತರಣೆಯಾದಲ್ಲಿ ನಾವೂ ಆಕಾಂಕ್ಷಿ ಎಂದು ಬಿಂಬಿಸುವುದು

ಅನುದಾನ ಬಿಡುಗಡೆ ವಿಚಾರದಲ್ಲಿನ ಸಣ್ಣಪುಟ್ಟ ವೈಮನಸ್ಯಗಳು

ಮೂಲೆಗುಂಪಾಗುವ ಆತಂಕದಲ್ಲಿ ಒಗ್ಗಟ್ಟು ಪ್ರದರ್ಶನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net