ವರ್ತುಲ ರಸ್ತೆ ಸ್ವಚ್ಛತೆಗೆ ಪರಿಹಾರ ಸೂತ್ರ!

5
Published on

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛತೆಯಲ್ಲಿ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸದಾ ಸ್ಥಾನ ಪಡೆಯುವ ಸಾಂಸ್ಕೃತಿಕ ನಗರಿ ಮೈಸೂರಿಗೆ ವರ್ತುಲ ರಸ್ತೆಯ(ರಿಂಗ್ ರೋಡ್) ತ್ಯಾಜ್ಯ ವಿಲೇವಾರಿ ತಲೆನೋವಾಗಿ ಪರಿಣಮಿಸಿದೆ. ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ನಗರ ಪಾಲಿಕೆ ವರ್ತುಲ ರಸ್ತೆಯ ಗ್ರಾಮ ಪಂಚಾಯಿತಿಗಳ ಮುಂದೆ ಪರಿಹಾರ ಸೂತ್ರವೊಂದನ್ನು ಮುಂದಿಟ್ಟಿದೆ.

ವರ್ತುಲ ರಸ್ತೆಯು ನಗರ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನಗರ ಪಾಲಿಕೆಗೆ ತ್ಯಾಜ್ಯ ವಿಲೇವಾರಿಯ ಜವಾಬ್ದಾರಿ ವಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ವರ್ತುಲ ರಸ್ತೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ನಗರಕ್ಕೆ ಕಪ್ಪು ಚುಕ್ಕೆಯಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ತ್ಯಾಜ್ಯ ವಿಲೇವಾರಿಯ ಜವಾಬ್ದಾರಿ ಹೊತ್ತುಕೊಳ್ಳಲು ಮುಂದೆ ಬಂದಿದೆ. ವರ್ತುಲ ರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿಗಳು ಮನೆ ಮನೆಗಳಿಂದ ತ್ಯಾಜ್ಯವನ್ನು ಒಣಕಸ ಹಾಗೂ ಹಸಿಕಸವಾಗಿ ಸಂಗ್ರಹಿಸಿ ಪಾಲಿಕೆಗೆ ನೀಡಬೇಕು ಹಾಗೂ ಸಾಗಣೆ ವೆಚ್ಚ ನೀಡಬೇಕು. ಈ ಎರಡು ಷರತ್ತುಗಳನ್ನು ಪಾಲಿಸಿದರೆ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧ ಎಂದು ನಗರ ಪಾಲಿಕೆ ಗ್ರಾಪಂಗಳ ಮುಂದೆ ಪರಿಹಾರ ಸೂತ್ರ ಇಟ್ಟಿದೆ.

ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ವರ್ತುಲ ರಸ್ತೆಯ ತ್ಯಾಜ್ಯದ ಸಮಸ್ಯೆ ಪ್ರಸ್ತಾಪಗೊಂಡಿತು. ತ್ಯಾಜ್ಯ ಸಂಸ್ಕರಣ ಘಟಕ ತೆರೆಯಲು ಗ್ರಾಮ ಪಂಚಾಯಿತಿಗಳ ಬಳಿ ಜಾಗವಿಲ್ಲದ ಕಾರಣ ಪಾಲಿಕೆಗೆ ನಿರ್ವಹಣಾ ವೆಚ್ಚ ಪಾವತಿ ಮಾಡಿ ತಾಜ್ಯ ವಿಲೇವಾರಿ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸಲಹೆ ನೀಡಿದ್ದಾರೆ.
ಆದರೆ, ವರ್ತುಲ ರಸ್ತೆಯು ನಗರ ಪಾಲಿಕೆ ವ್ಯಾಪ್ತಿಗೆ ಒಳಪಡದ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿಯ ಪೂರ್ಣ ಪ್ರಮಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಪಾಲಿಕೆಗೆ ಕಾನೂನಿನ ತೊಡಕು ಇದೆ. ಒಂದು ವೇಳೆ ಪೂರ್ಣ ಪ್ರಮಾಣದ ಜವಾಬ್ದಾರಿ ವಹಿಸಿಕೊಂಡರೆ ಹೆಚ್ಚುವರಿ ಪೌರ ಕಾರ್ಮಿಕರ ಅವಶ್ಯಕತೆ ಇದೆ. ಆದರೆ, ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಪಾಲಿಕೆಗೆ ಅವಕಾಶ ಇಲ್ಲ. ನಗರದ ತ್ಯಾಜ್ಯ ವಿಲೇವಾರಿ ಮಾಡಲು ಪೌರ ಕಾರ್ಮಿಕರ ಕೊರತೆ ಎದುರಾಗಿರುವ ಸಂದರ್ಭದಲ್ಲಿ ವರ್ತುಲ ರಸ್ತೆಯ ತ್ಯಾಜ್ಯ ವಿಲೇವಾರಿಯ ಪೂರ್ಣ ಜವಾಬ್ದಾರಿ ವಹಿಸಿಕೊಂಡರೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ.

ಈ ಸಮಸ್ಯೆಗಳನ್ನು ಗಮನಿಸಿದ ನಗರ ಪಾಲಿಕೆಯು ತ್ಯಾಜ್ಯ ವಿಲೇವಾರಿಗೆ ನಿಮ್ಮ ಸಹಕಾರ ಅಗತ್ಯ ಎಂದು ಗ್ರಾಪಂಗಳಲ್ಲಿ ಮನವಿ ಮಾಡಿದೆ. ಮನೆ ಮನೆಗಳಿಂದ ತ್ಯಾಜ್ಯವನ್ನು ಯಾವ ರೀತಿ ಸಂಗ್ರಹಿಸಬೇಕು, ಜನರು ಹಸಿಕಸ ಮತ್ತು ಒಣಕಸವನ್ನು ಯಾವ ರೀತಿ ಬೇರ್ಪಡಿಸಿ ನೀಡಬೇಕೆಂಬ ಕುರಿತು ತರಬೇತಿಯನ್ನು ನೀಡಲು ಸಹ ಪಾಲಿಕೆ ಸಿದ್ಧವಾಗಿದ್ದು, ಇದಕ್ಕೆ ಪಂಚಾಯಿತಿಗಳ ಸಹಕಾರದ ನಿರೀಕ್ಷೆಯಲ್ಲಿ ಪಾಲಿಕೆ ಇದೆ.

ಕಣ್ಣಿಗೆ ರಾಚುವ ಅಶುಚಿತ್ವ: ನಗರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಹೊರ ವರ್ತುಲ ರಸ್ತೆಯನ್ನು ಹಾದು ಬರುತ್ತಾರೆ. ಈ ಸಂದರ್ಭ ಪ್ರತಿಯೊಬ್ಬರಿಗೂ ಅಶುಚಿತ್ವ ಕಣ್ಣಿಗೆ ರಾಚುತ್ತದೆ. ನಗರ ಪಾಲಿಕೆಯ ಗಡಿ ತಿಳಿಯದ ಸಾಕಷ್ಟು ಜನರು ಮೈಸೂರು ನಗರ ಇಷ್ಟೊಂದು ಅಶುಚಿತ್ವದಿಂದ ಕೂಡಿದೆಯೇ ಎಂದು ಆಶ್ಚರ್ಯಗೊಳ್ಳುವುದು ಸಹಜ. ಸ್ವಚ್ಛತೆಗೆ ಸಹಕರಿಸುವಂತೆ ನಗರಕ್ಕೆ ಹೊಂದಿಕೊಂಡಿರುವ ಶ್ರೀರಾಂಪುರ, ಬೋಗಾದಿ, ಹಿನಕಲ್, ಹಂಚ್ಯಾ, ಸಾತಗಳ್ಳಿ, ಆಲನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ನಗರ ಪಾಲಿಕೆ ಸಾಕಷ್ಟು ಮನವಿ ಮಾಡಿದರೂ ಗ್ರಾಪಂಗಳಿಂದ ನಿರೀಕ್ಷಿತ ಪ್ರಮಾಣದ ಸಹಕಾರ ದೊರೆಯುತ್ತಿಲ್ಲ. ಇನ್ನಾದರೂ ಅವರಿಂದ ಸ್ಪಂದನೆ ದೊರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ವರ್ತುಲ ರಸ್ತೆಯ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸಲು ಸ್ಥಳೀಯ ಗ್ರಾಪಂಗಳ ಸಹಕಾರ ಅಗತ್ಯ. ಆದರೆ, ಅವರಿಂದ ನಮಗೆ ನಿರೀಕ್ಷಿತ ಪ್ರಮಾಣದ ಸಹಕಾರ ದೊರೆಯುತ್ತಿಲ್ಲ. ಪಂಚಾಯಿತಿಗಳು ಮನೆ ಮನೆಗಳಿಂದ ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡಬೇಕು. ಜತೆಗೆ ಸಾಗಣೆ ವೆಚ್ಚ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಅಲ್ಲದೆ, ಅವರಿಗೆ ತ್ಯಾಜ್ಯ ಸಂಗ್ರಹಿಸುವ ವಿಧಾನದ ಕುರಿತು ತರಬೇತಿ ನೀಡಲು ಸಹ ಸಿದ್ಧರಿದ್ದೇವೆ. ಗ್ರಾಪಂಗಳಿಂದ ಇಷ್ಟು ಸಹಕಾರ ದೊರೆತರೆ ವರ್ತುಲ ರಸ್ತೆಯಲ್ಲಿ ತ್ಯಾಜ್ಯದ ಸಮಸ್ಯೆ ಕಂಡು ಬರುವುದಿಲ್ಲ.
ಗುರುದತ್ತ ಹೆಗಡೆ ಆಯುಕ್ತ, ನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net