

ಬಂಕಾಪುರ (ಹಾವೇರಿ): ಲಾಕ್‌ಡೌನ್ ಮಧ್ಯೆ ಪ್ರಿಯಕರನನ್ನು ಹುಡುಕಿಕೊಂಡು ಬಂದ ಯುವತಿಗೆ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಮದುವೆ ಮಾಡಿಸಿದ ಅಪರೂಪದ ಪ್ರಸಂಗ ನಡೆಯಿತು.
ಲಕ್ಷ್ಮೇಶ್ವರ ತಾಲೂಕಿನ ಯತ್ನಳ್ಳಿ ಗ್ರಾಮದ ನಿರ್ಮಲಾ ಕಲ್ಮನಿ ತನ್ನ ಪ್ರಿಯಕರ ರವಿ ಯಲಿಗಾರನನ್ನು ಹುಡುಕಿಕೊಂಡು ಬಂಕಾಪುರಕ್ಕೆ ಬಂದಿದ್ದಳು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ನಂತರ ಪ್ರೀತಿಗೆ ತಿರುಗಿ ಮದುವೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದರು. ಆದರೆ, ಲಾಕ್‌ಡೌನ್ ಘೋಷಣೆಯಾದ ಕಾರಣ ಇಬ್ಬರೂ ಸ್ವಗ್ರಾಮಗಳಿಗೆ ಮರಳಿದ್ದರು.
ಯುವಕನ ಮನೆಯವರು ಮದುವೆ ಮಾಡಿಕೊಡಲು ವಿರೋಧ ವ್ಯಕ್ತಪಡಿಸಿದ್ದರು. ಶುಕ್ರವಾರ ಯುವತಿ ತನ್ನ ಇಬ್ಬರು ಸಹೋದರರ ಜತೆಗೆ ಯುವಕನ ಮನೆಗೆ ಬಂದು ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಆದರೆ, ಯುವಕ ಸಮ್ಮತಿಸದೆ ಇದ್ದಾಗ ಪೊಲೀಸರ ಮೊರೆ ಹೋಗಿದ್ದಾಳೆ.
ಪ್ರೇಮಿ ರವಿ ಮತ್ತು ಆತನ ತಂದೆಯನ್ನು ಠಾಣೆಗೆ ಕರೆಯಿಸಿದ ಪೊಲೀಸರು ಹಾಗೂ ಹಿರಿಯರು ಬುದ್ಧಿವಾದ ಹೇಳಿ ಮನವೊಲಿಸಿದರು. ನಂತರ ಠಾಣೆಯ ಆವರಣದಲ್ಲಿ ಹಿರಿಯರ ಸಮ್ಮುಖದಲ್ಲಿ ಯುವತಿಗೆ ತಾಳಿ ಕಟ್ಟಿಸಿ ಸರಳ ವಿವಾಹ ನೆರವೇರಿಸಿದ್ದಾರೆ.