ಹೊರಬರಲು ಹೆದರಿ ಪುಟ್ಟ ಮನೆಯಲ್ಲಿ ಮುದುರಿ ಕುಳಿತಿದ್ದಾರೆ ಇವರು; ಭಯಕ್ಕೆ ಕಾರಣ ಅಳುತ್ತ ಹೇಳಿದ್ದಾರೆ...

Sikh 29 may 20
Published on

ಕಾಬೂಲ್​: ಇಡೀ ಜಗತ್ತು ಕೊವಿಡ್​-19 ಭಯದಲ್ಲಿ ಇದೆ. ಸಂಕಷ್ಟ ಪಡುತ್ತಿದೆ. ಆದರೆ ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಜನರು ಬೇರೆಯದೇ ಆತಂಕದಲ್ಲಿದ್ದಾರೆ.

29 ವರ್ಷದ ಇಂದ್ರಜಿತ್ ಕೌರ್​ ಎಂಬಾಕೆ ತನ್ನ ಮೂವರು ಮಕ್ಕಳೊಂದಿಗೆ ಚಿಕ್ಕ ಮನೆಯಲ್ಲಿ ಮುದುರಿ ಕುಳಿತಿದ್ದಾರೆ. ಈಗೆರಡು ತಿಂಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡ ಆಕೆಗೆ, ಇನ್ನೂ ಭಯ ಬಿಟ್ಟಿಲ್ಲ. ಹೊರಗೆ ಬರಲೂ ಭಯ..ಅಲ್ಲಿರಲೂ ಹೆದರಿಕೆ ಎನ್ನುವಂಥ ಪರಿಸ್ಥಿತಿ.

ಮಾರ್ಚ್​ 25ರಂದು ಕಾಬೂಲ್​ನ ಶೋರ್ ಬಜಾರ್​ನಲ್ಲಿರುವ ಸಿಖ್ಖರ ಗುರುದ್ವಾರದ ಮೇಲೆ ಉಗ್ರರು ಭಯಾನಕವಾಗಿ ದಾಳಿ ಮಾಡಿದ್ದರು. ಧಾರ್ಮಿಕ ಸಮಾರಂಭ ನಡೆಯುತ್ತಿದ್ದ ವೇಳೆ ನಡೆದ ಈ ಉಗ್ರರ ದಾಳಿಯಲ್ಲಿ 25 ಮಂದಿ ಮೃತಪಟ್ಟಿದ್ದರು. 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇಂದ್ರಜಿತ್​ ಕೌರ್​ ಅವರ ಪತಿ ಹಾಗೂ ಇಬ್ಬರು ಸಹೋದರರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ಇದೀಗ ಇಂದ್ರಜಿತ್​ ಸೇರಿ, ಅಲ್ಲಿನ ಅನೇಕರಿಗೆ ಮತ್ತೊಂದು ಉಗ್ರ ದಾಳಿ ಆಗಬಹುದು ಎಂಬ ಆತಂಕ ಶುರುವಾಗಿದೆ. ಎಷ್ಟೊತ್ತಿಗೆ ಯಾರು ದಾಳಿ ಮಾಡುತ್ತಾರೆ ಎಂದು ಗೊತ್ತಾಗುವುದಿಲ್ಲ. ನಮಗಿಲ್ಲಿ ಇರಲು ತುಂಬ ಹೆದರಿಕೆ ಎಂದು ಅವರು ಹೇಳಿದ್ದಾರೆ.

ಕರೊನಾ ವೈರಸ್​ಗಿಂತಲೂ ಜಾಸ್ತಿ ನಾವು ಇನ್ನೊಂದು ಉಗ್ರದಾಳಿ ಆಗಬಹುದು ಎಂಬ ಆತಂಕದಲ್ಲೇ ಇದ್ದೇವೆ. ಅಂದಿನ ದಾಳಿಯ ಭೀಕರತೆ ಮರೆಯಲಾಗುತ್ತಿಲ್ಲ ಎಂದಿದ್ದಾರೆ.

ನಾನು ನನ್ನ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಾಕ್ರಾಂತಳಾಗಿದ್ದೇನೆ. ಅವರನ್ನು ಕಾಪಾಡಿಕೊಳ್ಳಬೇಕು. ಎಷ್ಟಾಗತ್ತೋ ಅಷ್ಟು ಬೇಗ ನನಗೆ ಭಾರತಕ್ಕೆ ಹೋಗಬೇಕು. ನಮ್ಮನ್ನು ಇಲ್ಲಿಂದ ಕಳಿಸಿಕೊಡಿ ಎಂದು ಅಳುತ್ತಿದ್ದಾರೆ.

ಇಲ್ಲಿ ಒಂದೊಂದು ಚಿಕ್ಕಮನೆಯಲ್ಲಿ 6ರಿಂದ 10 ಮಂದಿ ವಾಸವಿದ್ದೇವೆ. ತೀರ ಹಿಂಸೆಯಾಗುತ್ತಿದೆ. ನಮಗೂ ಬೆದರಿಕೆಯಿದೆ. ಯಾವ ಕ್ಷಣದಲ್ಲಾದರೂ ಮತ್ತೊಮ್ಮೆ ಉಗ್ರರು ನಮ್ಮ ಮೇಲೆ ದಾಳಿ ಮಾಡಬಹುದು ಎಂದು ಇನ್ನೋರ್ವರು ಅಳಲು ತೋಡಿಕೊಂಡಿದ್ದಾರೆ.

ಇಲ್ಲಿ ಸಿಖ್ಖರು ಮೂಲ ನಿವಾಸಿಗಳೂ ಇದ್ದಾರೆ, ಭಾರತದಿಂದ ವಲಸೆ ಹೋದವರೂ ಇದ್ದಾರೆ. ಈಗ ಮಾರ್ಚ್​ 25 ರ ದಾಳಿ ಬಳಿಕ ಹಲವರು ಭಾರತಕ್ಕೆ ಮರಳಲು ಇಚ್ಛಿಸುತ್ತಿದ್ದಾರೆ. ಹಾಗೇ ವೀಸಾ ಅನುಮೋದನೆಗಾಗಿ ತಾವು ಕಳಿಸಿದ ಲಿಖಿತ ಮನವಿಯನ್ನು ಪರಿಗಣಿಸಿ, ವಿಳಂಬ ಮಾಡಬೇಡಿ ಎಂದೂ ಭಾರತದ ರಾಯಭಾರಿಗೆ ಮನವಿ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net