

ಮಂಡ್ಯ: ಕರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದರೂ, ಅಲ್ಲಲ್ಲಿ ಈ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ.
ಇದೀಗ ಕೆ.ಆರ್.ಪೇಟೆ ತಾಲೂಕಿನ ಕೊಡಗಹಳ್ಳಿ ಗ್ರಮದಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ನಾಲ್ಕೈದು ಜನ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೊಡಗಹಳ್ಳಿಯ ಮಂಜೇಗೌಡ, ರುದ್ರೇಶ್, ಪ್ರಿಯಾಂಕಾ, ಗೀತಾ ಮತ್ತು ನಿಖಿಲ್ ಎಂಬುವರು ಕ್ವಾರಂಟೈನ್ ಮುಗಿಸಿ ಮನೆಗೆ ಬಂದಿದ್ದರು. 14 ದಿನಗಳ ಕ್ವಾರಂಟೈನ್ ಮುಗಿಸಿ ಬಂದ ಅವರಿಗೆ, ನಿಯಮಗಳನ್ನು ತಿಳಿಸಲೆಂದು ಆಶಾ ಕಾರ್ಯಕರ್ತೆ ಕೆ.ವೈ.ಶೋಭಾ ಅವರು ಹೋಗಿದ್ದರು.
ಮನೆಗೆ ಹೋದ ಶೋಭಾ, ಅವರಿಗೆ ಇನ್ನೂ ಸ್ವಲ್ಪ ದಿನ ಹೋಂ ಕ್ವಾರಂಟೈನ್ನಲ್ಲಿರಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಿ ಎಂದು ಹೇಳುತ್ತಿದ್ದಂತೆ ಆಕ್ರೋಶದಿಂದ, ನಿನ್ನದು ಅತಿಯಾಯ್ತು, ನಮ್ಮ ಮೇಲೆ ದೌರ್ಜನ್ಯ ಮಾಡುತ್ತೀಯಾ? ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹೊಡೆದಿದ್ದಾರೆ. ಈ ಬಗ್ಗೆ ಶೋಭಾ ಅವರೇ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಅದೇ ಮನೆಯ ಇನ್ನೋರ್ವನಿಗೆ ಕ್ವಾರಂಟೈನ್ ಸೀಲ್ ಹಾಕಲು ಹೋದಾಗಲೂ ನಿಂದಿಸಿದ್ದರು. ಇದೀಗ ಹೊಡೆದಿದ್ದಾರೆ ಎಂದು ಶೋಭಾ ಹೇಳಿದ್ದಾರೆ.
ಹಲ್ಲೆಗೊಳಗಾದ ಶೋಭಾ ಅವರಿಗೆ ಕೆ.ಆರ್.ಪೇಟೆ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)