More

    ಅಂಗನವಾಡಿ ಮಕ್ಕಳಿಗೆ ರಜೆಯಲ್ಲೂ ಆಹಾರ –  ದ.ಕ. ಜಿಲ್ಲೆಯಲ್ಲಿ ಮನೆಗೆ ತಲುಪಿಸುವ ವ್ಯವಸ್ಥೆ –  ಚಿಣ್ಣರಲ್ಲಿ ಪೌಷ್ಟಿಕಾಂಶದ ಕೊರತೆಯಾಗದಂತೆ ಕ್ರಮ

    ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯಾಗಬಾರದೆಂಬ ಕಾರಣಕ್ಕೆ ಅಂಗನವಾಡಿ ಕೇಂದ್ರದ ಮೂಲಕ ಆಹಾರ ವಿತರಣೆ ಮಾಡಲಾಗುತ್ತಿತ್ತು. ಅನುದಾನದ ಕೊರತೆಯಿಂದ ಸ್ಥಗಿತವಾಗಿದ್ದ ಅಕ್ಕಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಕೇಂದ್ರಗಳಿಗೆ ವಿತರಿಸಲು ಮುಂದಾಗುವ ಮೂಲಕ ದಕ್ಷಿಣ ಕನ್ನಡದಲ್ಲಿ ಇದ್ದ ಸಮಸ್ಯೆಗೆ ತೆರೆ ಬಿದ್ದಿದೆ.

    ಅಂಗನವಾಡಿಯಲ್ಲಿ ಮಕ್ಕಳಿಗೆ ದಿನಕ್ಕೆ 8 ರೂ.ಹಾಗೂ ಗರ್ಭಿಣಿ-ಬಾಣಂತಿಯರಿಗೆ ದಿನಕ್ಕೆ 21 ರೂ. ವಿನಿಯೋಗಿಸಿ ಆಹಾರ ನೀಡಲಾಗುತ್ತದೆ. ಜನವರಿ ಬಳಿಕ ಅನುದಾನಗಳು ಸಮರ್ಪಕವಾಗಿ ಬಾರದ ಹಿನ್ನೆಲೆಯಲ್ಲಿ ದಾಸ್ತಾನಿದ್ದ ಆಹಾರ ನೀಡಲಾಗಿತ್ತು. -ಬ್ರವರಿಯಲ್ಲಿ ಸಂಗ್ರಹ ಮುಗಿದ ಕಾರಣದಿಂದ ಕೆಲವು ಭಾಗದಲ್ಲಿ ಮಕ್ಕಳ ಪೋಷಕರಲ್ಲೇ ಮನೆಯಿಂದ ಅಕ್ಕಿ ತರಿಸಿಕೊಂಡು ಮಧ್ಯಾಹ್ನದ ಊಟ ನೀಡುವ ಕಾರ್ಯ ನಡೆದಿದೆ. ಮಾರ್ಚ್‌ನಲ್ಲಿಯೂ ಇದು ಮುಂದುವರಿದ್ದು, ಹೆಚ್ಚಿನ ಅಂಗನವಾಡಿಯಲ್ಲಿ ಆಹಾರವೇ ನೀಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಭಾಗಕ್ಕೆ ಕಿಚಡಿಯಂತ ಕಳಪೆ ಆಹಾರ ವಿತರಣೆಯೂ ನಡೆದಿತ್ತು.

    ವಿಚಾರ ಸರ್ಕಾರದ ಗಮನಕ್ಕೆ ತಲುಪುತ್ತಿದ್ದಂತೆ ಏಪ್ರಿಲ್‌ನಿಂದ ಕೇಂದ್ರಗಳಿಗೆ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗೋಽ ಕಡಿ ಸೇರಿ ಹಳೆಯ ಆಹಾರ ದಾಸ್ತಾನು ಇದ್ದವರಿಗೆ ಅದನ್ನು ಮುಗಿಸಿದ ಬಳಿಕ ಊಟದ ವ್ಯವಸ್ಥೆಯನ್ನು ನೀಡುವಂತೆ ಸೂಚನೆಯನ್ನು ಇಲಾಖೆ ನೀಡಿದೆ. ಹೆಚ್ಚಿನ ಭಾಗದಲ್ಲಿ ಏಪ್ರಿಲ್ ಮೊದಲ ವಾರದಿಂದಲೇ ಅಕ್ಕಿ ಸಹಿತವಾದ ದಕ್ಷಿಣ ಕನ್ನಡಕ್ಕೆ ಒಗ್ಗುವ ಆಹಾರವನ್ನು ನೀಡಲಾಗುತ್ತಿದೆ.

    ಗಮನ ಸೆಳೆದ ವಿಜಯವಾಣಿ ವರದಿ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಗತ್ಯ ಅನುದಾನ ಬಿಡುಗಡೆಯಾಗದೆ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿ-ಬಾಣಂತಿಯರಿಗೆ ಅಗತ್ಯ ಆಹಾರವನ್ನು ಕಳೆದ ಎರಡು ತಿಂಗಳಿಂದ ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಮಕ್ಕಳಿಗೆ ಮಧ್ಯಾಹ್ನ ಆಹಾರದ ಕೊರತೆ ಆಗಬಾರದು ಎಂಬ ಕಾರಣಕ್ಕೆ, ಪೋಷಕರಲ್ಲೇ ಆಹಾರವನ್ನು ಬೇಡಿ ಬೇಯಿಸಿ ಹಾಕುವ ಪರಿಸ್ಥಿತಿ ಇತ್ತು. ಈ ಬಗ್ಗೆ ವಿಜಯವಾಣಿ ಮಾ.15ರಂದು ವರದಿ ಮಾಡಿತ್ತು.

    ಅಂಗನವಾಡಿಯಲ್ಲಿ ಈಗ ಏನಿದೆ?

    ಗರ್ಭಿಣಿಯರಿಗೆ 25 ದಿನಕ್ಕೆ ಗೋದಿ ಹುಡಿ ಸುಮಾರು 3.5 ಕೆ ಜಿ, ಎಣ್ಣೆ 120 ಗ್ರಾಂ, ಸಾಂಬಾರು ಮಸಾಲೆ 500 ಗ್ರಾಂ, ಮೊಟ್ಟೆ 25 ನೀಡಲಾಗುತ್ತಿದೆ. ಮಕ್ಕಳಿಗೆ ದಿನಕ್ಕೆ ಅಕ್ಕಿ 80 ಗ್ರಾಂ, ತೊಗರಿ ಬೇಳೆ 12 ಗ್ರಾಂ, ಸಾಂಬಾರು ಹುಡಿ 6 ಗ್ರಾಂ, ಉಪ್ಪು 3 ಗ್ರಾಂ, ಹಾಲಿನ ಹುಡಿ 15 ಗ್ರಾಂ ಜತೆಗೆ ಮೊಟ್ಟೆ ವಾರಕ್ಕೆ ಎರಡರಂತೆ ನೀಡಲಾಗುತ್ತಿದೆ. 3ರಿಂದ 6 ವರ್ಷದ ನಡುವಿನ ಮಿಲಿಟ್ರಿ ಲಡ್ಡು ಹುಡಿ ದಿನಕ್ಕೆ 15 ಗ್ರಾಂ ವಿತರಣೆಯಾಗುತ್ತಿದೆ. 6 ತಿಂಗಳಿನ 3 ವರ್ಷ ಒಳಗಿನ ಮಕ್ಕಳಿಗೆ 25 ದಿನಕ್ಕೆ 3 ಕೆ.ಜಿ ಪುಷ್ಟಿ, ಹಾಲಿನ ಹುಡಿ 300 ಗ್ರಾಂ, ಸಕ್ಕರೆ 100 ಗ್ರಾಂ ನೀಡಲಾಗುತ್ತಿದೆ.

    ಬಿಸಿಲಿಗೆ ರಜೆ

    ದ.ಕ.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದ್ದು, ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಿ ರಜೆ ಘೋಷಿಸಿದೆ. ಸದ್ಯ ಅಂಗನವಾಡಿ ಸಿಬ್ಬಂದಿ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 10ರಿಂದ 26 ವರೆಗೆ ಅಂಗನವಾಡಿ ಸಿಬ್ಬಂದಿಗೂ ರಜೆ ನೀಡಿದ್ದು, ಮೇ 27ರಂದು ಪುನಾರಂಭಗೊಳ್ಳಲಿದೆ. ಮಕ್ಕಳಿಲ್ಲದ ಕಾರಣ ಅಂಗನವಾಡಿಗೆ ತಕ್ಷಣದಿಂದಲೇ ರಜೆ ಘೋಷಿಸಬೇಕೆಂಬ ಬೇಡಿಕೆಯೂ ಕೇಳಿಬರುತ್ತಿದೆ. ಅಂಗನವಾಡಿಗಳಿಗೆ ಸುದೀರ್ಘ 45 ದಿನಗಳ ರಜೆ ಹಿನ್ನೆಲೆಯಲ್ಲಿ ಆಹಾರ ವಸ್ತುಗಳನ್ನು ಅವರ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ  ಮಾಡಲಾಗಿದೆ. ಮಕ್ಕಳ ಪಾಲಕರು ಅಂಗನವಾಡಿಗಳಿಗೆ ಬಂದು ಲೆಕ್ಕ ಪ್ರಕಾರ ಆಹಾರ ವಸ್ತುಗಳನ್ನು ಪಡೆದುಕೊಂಡು ಹೋಗಬೇಕು.

    ಬಾಕಿಗಳಿಗೂ ಮುಕ್ತಿ!

    ಅಂಗನವಾಡಿ ಶಿಕ್ಷಕಿಯರಿಗೆ ತಿಂಗಳಿಗೆ 11500 ರೂ. ಹಾಗೂ ಸಹಾಯಕರಿಗೆ 6 ಸಾವಿರ ವೇತನ ನೀಡಲಾಗುತ್ತದೆ. ಜನವರಿಗೆ ಹಾಗೂ -ಬ್ರವರಿಯಿಂದ ಇದರ ಪಾವತಿಯೂ ಸಮರ್ಪಕವಾಗಿ ಆಗದ ಬಗ್ಗೆ ವಿಜಯವಾಣಿ ವರದಿ ಉಲ್ಲೇಖಿಸಿತ್ತು. ಸದ್ಯ ಅಂಗನವಾಡಿ ಸಹಾಯಕಿಯರಿಗೆ ಸಂಪೂರ್ಣ ವೇತನವಾಗಿದ್ದು, ಅಂಗನವಾಡಿ ಶಿಕ್ಷಕಿಯರಿಗೆ ಮಾರ್ಚ್‌ನಿಂದ ಬಾಕಿ ಉಳಿದಿದೆ. ಗುತ್ತಿಗೆ ಆಧಾರದಲ್ಲಿ ಪಡೆದ ವಾಹನಗಳ ಬಾಕಿಯನ್ನು ಹಿಂದಿರುಗಿಸಲಾಗುತ್ತಿದೆ. ವಿದ್ಯುತ್ ಬಿಲ್, ಕಟ್ಟಡ ಬಾಡಿಗೆ ಸೇರಿ ಎಲ್ಲ ಬಾಕಿಗಳಿಗೂ ಅನುದಾನ ನೀಡುವ ಮೂಲಕ ಬಾಕಿಯನ್ನು ಚುಕ್ತ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts