ಕೇರಳದ 400 ಪೋಷಕರ ವಿರುದ್ಧ ಕೇಸ್ ದಾಖಲು.. ಏಕೆ? ಏನು ? ಎತ್ತ?

KEAM
Published on

ತಿರುವನಂತಪುರ: ಕೇರಳ ಎಂಜಿನಿಯರಿಂಗ್ ಆರ್ಕಿಟೆಕ್ಚರ್ ಮೆಡಿಕಲ್ (ಕೆಇಎಎಂ) ಪ್ರವೇಶ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಪಾಲಕರು ಶಾಲಾ ಆವರಣದಲ್ಲಿ ಜಮಾಯಿಸಿ ಸಾಮಾಜಿಕ ಅಂತರ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ 400 ಕ್ಕೂ ಹೆಚ್ಚು ಪೋಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿವಿಧ ಕೇಂದ್ರಗಳಲ್ಲಿ ಕೆಇಎಎಂ ಪ್ರವೇಶ ಪರೀಕ್ಷೆಗೆ ಹಾಜರಾದ ಐದು ವಿದ್ಯಾರ್ಥಿಗಳು ಮತ್ತು ಕೇಂದ್ರವೊಂದರ ಹೊರಗೆ ಕಾಯುತ್ತಿದ್ದ ಒಬ್ಬ ಪೋಷಕ ಕೊರನಾವೈರಸ್ ಸೋಂಕಿತರಾಗಿರುವುದು ಆತಂಕವನ್ನು ಸೃಷ್ಟಿಸಿದೆ.

ರಾಜಧಾನಿಯ ವಿವಿಧ ಪರೀಕ್ಷಾ ಕೇಂದ್ರಗಳ ಹೊರಗೆ ಜಮಾಯಿಸಿದ ಪೋಷಕರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಮ್ಯೂಸಿಯಂ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕಾಟನ್ ಹಿಲ್ಸ್ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ 300 ಕ್ಕೂ ಹೆಚ್ಚು ಜನರು ಜಮಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೇಂಟ್ ಮೇರಿಸ್ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಇದೇ ರೀತಿಯ ಪರಿಸ್ಥಿತಿ ಇತ್ತು. ಐದು ವಿದ್ಯಾರ್ಥಿಗಳ ಪೈಕಿ ಒಬ್ಬಾತ ತಿರುವನಂತಪುರದ ಕರಾವಳಿ ಹಾಟ್‌ಸ್ಪಾಟ್‌ನ ಪೂಂಥುರಾ ನಿವಾಸಿ, ಅಲ್ಲಿ ಸಮುದಾಯ ಹರಡುವಿಕೆ ಈಗಾಗಲೇ ದೃಢ ಪಟ್ಟಿದೆ.

ಇಬ್ಬರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸೋಂಕು ದೃಢಪಟ್ಟ ವರದಿ ಬಂದಿದ್ದರೂ ಸಹ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆತಂಕಪಡುವ ವಾತಾವರಣವಿಲ್ಲ ಎಂದು ಹೇಳಿದ್ದಾರೆ. "ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆ ನಡೆಸಲಾಗಿದೆ" ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜುಲೈ 21 ರಂದು ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೋಂಕು ದೃಢಪಟ್ಟ ವಿದ್ಯಾರ್ಥಿಯೊಂದಿಗೆ ವಲಿಯತುರಾದ ಸೇಂಟ್ ಆಂಟನಿ ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ ಮತ್ತು ಅವರ ಕುಟುಂಬವನ್ನು ಗುರುತಿಸಿ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ. ಇಡಿ ಕರಾವಳಿ ಪ್ರದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ.

ಏತನ್ಮಧ್ಯೆ, ಜುಲೈ 21 ರಂದು ರಾಜ್ಯದ ಹಲವಾರು ವೈದ್ಯರು ಮತ್ತು ನರ್ಸ್​​ಗಳಿಗೆ ಸೋಂಕು ದೃಢಪಟ್ಟಿದೆ. ಕೋಳಿಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 16 ವೈದ್ಯರು, 17 ನರ್ಸಿಂಗ್ ಸಿಬ್ಬಂದಿ ಮತ್ತು ಇಬ್ಬರು ನರ್ಸಿಂಗ್ ಸಹಾಯಕರು ಕ್ವಾರಂಟೈನ್​​ನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net