

ವಿಜಯವಾಡ: 13 ವರ್ಷದ ಬಾಲಕಿಯನ್ನು ಆಕೆಯೇ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆಕೆಯನ್ನು ರಕ್ಷಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ಬಾಲಕಿಯ ಮಲ ಸಹೋದರ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಸಿಂಗರಾಯಕೊಂಡ ಪಟ್ಟಣದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಗ್ಯಾಂಗ್‌ಗೆ ಮಾರಿದ್ದ. ಜುಲೈ 18 ರಂದು ಈ ಘಟನೆ ನಡೆದಿತ್ತು. ಆದರೆ ಮಂಗಳವಾರ ಬಾಲಕಿ ಕರೆ ಮಾಡಿ ಪೊಲೀಸರ ಗಮನಕ್ಕೆ ತಂದನಂತರ ಮಂಗಳವಾರ ಈ ಘಟನೆ ಬೆಳಕಿಗೆ ಬಂದಿದೆ.
ಆಕೆ ಕರೆ ಮಾಡಿದಾಗ ಆ ಸಂಖ್ಯೆಯ ಜಾಡು ಹಿಡಿದು ಕಾರ್ಯಪ್ರವೃತ್ತರಾದ ಪೊಲೀಸರು ಆ ಸ್ಥಳವನ್ನು ಪತ್ತೆಹಚ್ಚಿ ನಂತರ, ರಹಸ್ಯ ಕಾರ್ಯಾಚರಣೆ ನಡೆಸಿ ಅವಳನ್ನು ರಕ್ಷಿಸಿದ್ದಾರೆ.
ಪೊಲೀಸರ ಪ್ರಕಾರ, ಆ ಬಾಲಕಿ ಆಕೆಯ ಅಪ್ಪನ ಎರಡನೇ ಹೆಂಡತಿಯ ಮಗಳು. ಆಸ್ತಿ ವಿವಾದ ಸೇರಿದಂತೆ ಹಲವಾರು ಸಮಸ್ಯೆಗಳಿಂದಾಗಿ ಆಕೆಯ ಹೆತ್ತವರ ವೈವಾಹಿಕ ಜೀವನವು ಕಲಹಗಳಿಂದ ಕೂಡಿತ್ತು. ಆದ್ದರಿಂದ, ಆಕೆ ನೆಲ್ಲೂರು ಜಿಲ್ಲೆಯ ಕವಾಲಿಯಲ್ಲಿ ತನ್ನ ಮಲ ಸಹೋದರನೊಂದಿಗೆ ವಾಸಿಸುತ್ತಿದ್ದಳು. ಜುಲೈ 12 ರಂದು, ಮಲ ಸಹೋದರ ಮತ್ತು ಅವನ ಹೆಂಡತಿ ಆಕೆಯನ್ನು ಸಿಂಗರಾಯಕೊಂಡಕ್ಕೆ ಕರೆದೊಯ್ದರು, ಅಲ್ಲಿ ಆಕೆಯನ್ನು 27,000 ರೂಗಳಿಗೆ ವೇಶ್ಯಾವಾಟಿಕೆ ದಂಧೆಗೆ ಮಾರಲಾಯಿತು.
ಅವಳು, ಹಲವು ರೀತಿ ಪ್ರಯತ್ನ ಪಟ್ಟು ಪೊಲೀಸರಿಗೆ ಕರೆ ಮಾಡುವಲ್ಲಿ ಯಶಸ್ವಿಯಾದಳು ಸ್ಥಳಕ್ಕಾಗಮಿಸಿ, ಆಕೆಯನ್ನು ರಕ್ಷಿಸಿದ ಪೊಲೀಸರು ಹೇಳಿಕೆಯನ್ನು ದಾಖಲಿಸಿದ್ದಾರೆ.
ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ (2012), ಮತ್ತು ಅಕ್ರಮ ಮಾನವ ಸಾಗಾಣಿಕೆ (ತಡೆಗಟ್ಟುವಿಕೆ) ಕಾಯ್ದೆಯಡಿ ಕಂದುಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವೇಶ್ಯಾವಾಟಿಕೆ ಕೇಂದ್ರ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮಲಸಹೋದರ ಮತ್ತು ಅತನ ಹೆಂಡತಿಯ ಬಂಧನ ಇನ್ನೂ ದಾಖಲಿಸಲಾಗಿಲ್ಲ.