

ಲಖನೌ: ಭೂ ವಿವಾದಕ್ಕೆ ಸಂಬಂಧಿಸಿದಂತೆ ತಮಗೆ ನ್ಯಾಯ ಕೊಡಿಸುವಂತೆ ಕೋರಿ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಕಚೇರಿ ಎದುರೇ ತಾಯಿ-ಮಗಳು ಬೆಂಕಿಹಚ್ಚಿಕೊಂಡ ಘಟನೆ ಮೊನ್ನೆ ನಡೆದಿತ್ತು. ಇವರಲ್ಲಿ ತಾಯಿ ಸಾಫಿಯಾ (50) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಆಘಾತಕಾರಿ ಸಂಗತಿ ಎಂದರೆ, ಭೂವಿವಾದದಲ್ಲಿ ನೊಂದಿರುವ ಈ ಮಹಿಳೆಯ ಜೀವದ ಜತೆ ಚೆಲ್ಲಾಟವಾಡಿರುವ ಗಂಭೀರ ಆರೋಪ ಕಾಂಗ್ರೆಸ್‌ನ ಮಾಜಿ ವಕ್ತಾರ ಅನೂಪ್ ಪಟೇಲ್, ಅಮೇಠಿ ಜಿಲ್ಲೆಯ ಎಐಎಂಐಎಂ (All India Council for Unity of Muslims) ಅಧ್ಯಕ್ಷ ಖಾದಿರ್ ಖಾನ್ ಹಾಗೂ ರಾಜಕೀಯವಾಗಿ ಗುರುತಿಸಿಕೊಂಡಿರುವ ಆಸ್ಮಾ ಮತ್ತು ಸುಲ್ತಾನ್ ಎನ್ನುವವರ ಮೇಲಿದ್ದು, ಇವರ ವಿರುದ್ಧ ಕೇಸ್ ದಾಖಲಾಗಿದೆ.
ತಮಗೆ ನ್ಯಾಯ ಕೊಡಿಸಿ ಎಂದು ಬೇಡಿಬಂದ ಮಹಿಳೆ ಮೊದಲು ಉತ್ತರ ಪ್ರದೇಶದ ಕಾಂಗ್ರೆಸ್‌ನ ಕಚೇರಿಗೆ ಹೋಗಿ ಅನೂಪ್ ಪಟೇಲ್ ಅವರನ್ನು ಭೇಟಿಯಾಗಿರುವ ಬಗ್ಗೆ ತಮ್ಮಲ್ಲಿ ಸಾಕ್ಷ್ಯಾಧಾರಗಳು ಇರುವುದಾಗಿ ಪೊಲೀಸರು ಹೇಳಿದ್ದಾರೆ.
ಸಾಫಿಯಾ ಹಾಗೂ ಅವರ ಮಗಳಿಗೆ ಬೆಂಕಿ ಹಚ್ಚಿಕೊಂಡು ಹೆದರಿಸುವಂತೆ ಕುಮ್ಮಕ್ಕು ನೀಡಿರುವ ಆರೋಪ ಇವರ ಮೇಲಿದೆ. ಈ ಮಾತಿನಂತೆ ಇಬ್ಬರೂ ಮುಖ್ಯಮಂತ್ರಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡಿದ್ದರು. ಅವರ ಪೈಕಿ ತಾಯಿ ನಿನ್ನೆ ಮಧ್ಯರಾತ್ರಿ ಮೃತಪಟ್ಟರೆ, ಮಗಳು ಜೀವನ್ಮರಣಗಳ ನಡುವೆ ಹೋರಾಟ ನಡೆಸಿರುವುದಾಗಿ ವರದಿಯಾಗಿದೆ.
'ಈ ರೀತಿ ಸ್ವಯಂ ಬೆಂಕಿ ಹಂಚಿಕೊಳ್ಳುವಂತೆ ಸಾಫಿಯಾರನ್ನು ಕೆಲವರು ಪ್ರಚೋದಿಸಿದ್ದಾರೆ. ಈ ಪ್ರಕರಣ ಸಂಬಂಧ ಕೆಲವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಅವರು ತಿಳಿಸಿದರು.