ಮನೆಯ ಫ್ರಿಡ್ಜ್​ನಲ್ಲಿತ್ತು ಮೃತದೇಹ: ನಿಗೂಢ ಕೇಸ್​ ಬೆನ್ನತ್ತಿ ಹೋದ ಪೊಲೀಸರಿಗೆ ಮಹಿಳೆಯ ಕರಾಳ ಮುಖ ಬಯಲು!

Fridge 1
Published on

ಹೈದರಾಬಾದ್​: ಹೈದರಾಬಾದ್​ನ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕ ನಗರದ ಮನೆಯೊಂದರ ಫ್ರಿಡ್ಜ್​ನಲ್ಲಿ ಕಳೆದ ಶನಿವಾರ ವ್ಯಕ್ತಿಯೊಬ್ಬನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ನಿಗೂಢ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರು ಸಾವಿನ ರಹಸ್ಯವನ್ನು ಭೇದಿಸಿದ್ದಾರೆ.

ಕಾರ್ಮಿಕ ನಗರದ ಮನೆಯ ಮಾಲೀಕ ತನ್ನ ಒಂದು ಮನೆಯನ್ನು ಲೀಸ್​ಗೆಂದು ನೀಡಿದ್ದ. ಆ ಮನೆ ಕಳೆದ ಕೆಲವು ದಿನಗಳಿಂದ ಲಾಕ್​ ಆಗಿತ್ತು. ದಿನ ಕಳೆದಂತೆ ಆ ಮನೆಯಿಂದ ದುರ್ವಾಸನೆ ಬರುವುದನ್ನು ಗಮನಿಸಿದ ಮಾಲೀಕ ಹೆದರಿ, ಪೊಲೀಸರಿಗೆ ಕರೆ ಮಾಡಿದಾಗ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು.

ಫ್ರಿಡ್ಜ್​ನಲ್ಲಿ ಪತ್ತೆಯಾದ ಮೃತದೇಹ ಸಿದ್ದಿಖ್​ ಅಹ್ಮದ್​ (38) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಟೈಲರ್​ ಆಗಿದ್ದ ಸಿದ್ದಿಖ್​, ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಎರಡು ದಿನಗಳ ಹಿಂದೆ ಸಿದ್ದಿಖ್​ ಪತ್ನಿ ತವರು ಮನೆಗೆ ಹೋಗಿದ್ದಳು. ಇದರ ನಡುವೆ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ನೋಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದಾಗ, ಬಂದು ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಮನೆಯ ಫ್ರಿಡ್ಜ್​ನಲ್ಲಿ ಸಿದ್ದಿಖ್​ ಮೃತದೇಹ ಪತ್ತೆಯಾಗಿದೆ.

ನಿಗೂಢ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರಿಗೆ ಅಕ್ರಮ ಸಂಬಂಧದ ಕತೆ ತೆರೆದುಕೊಂಡಿದ್ದು, ಅಲ್ಲಿಗೆ ಕೊಲೆ ಎಂಬುದು ಖಚಿತವಾಗಿದೆ. ಈ ಕೊಲೆಯನ್ನು ಮೊಹಮ್ಮದ್​ ಅಲಿ ಎಂಬಾತ ಎಸಗಿದ್ದಾನೆ. ಕಾರಣ ಈತ ಸಿದ್ದಿಖ್​ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇಬ್ಬರು ಸೇರಿ ಸಂಚು ಹೂಡಿ ಕೊಲೆ ಮಾಡಿರುವ ಆರೋಪದ ಮೇಲೆ ಸೋಮವಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್​ ಅಲಿ ತನ್ನ ಪತ್ನಿ ಜತೆಗಿರುವುದನ್ನು ಸಿದ್ದಿಖ್​ ನೇರವಾಗಿ ನೋಡಿದ್ದ. ಇದಾದ ಬಳಿಕ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ. ಹಲವಾರು ಹಲ್ಲೆಯನ್ನು ಮಾಡಿದ್ದ. ಇದನ್ನು ತಾಳಲಾರದೆ ಸಿದ್ದಿಖ್​ ಪತ್ನಿ, ಪ್ರಿಯಕರ ಮೊಹಮ್ಮದ್​ ಅಲಿ ಸೇರಿ ಸಂಚು ಹೂಡಿ ಗಂಡನನ್ನು ಕೊಂದಿದ್ದಾಳೆ.

ತಮ್ಮ ಯೋಜನೆಯಂತೆ ಸಿದ್ದಿಖ್​ ಪತ್ನಿ ತನ್ನ ಮಕ್ಕಳೊಂದಿಗೆ ತವರು ಮನೆಗೆ ಹಬ್ಬಕ್ಕೆಂದು ತೆರಳಿದ್ದಾಳೆ. ಬಳಿಕ ಮೊಹಮ್ಮದ್​ ಅಲಿ ಕಬ್ಬಿಣದ ಸಲಾಕೆಯೊಂದಿಗೆ ಸಿದ್ದಿಖ್​ ಮನೆಗೆ ಹೋಗಿದ್ದಾನೆ. ಸ್ಕ್ರೂಡ್ರೈವರ್ ಸಹಾಯದಿಂದ​ ಕಿಟಕಿಗಳನ್ನು ಬಿಚ್ಚಿ ಮನೆಯೊಳಗೆ ಪ್ರವೇಶಿಸಿ ಸಿದ್ದಿಖ್​ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಿದ್ದಿಖ್​ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಇದಾದ ಬಳಿಕ ಮೃತದೇಹವನ್ನು ಫ್ರಿಡ್ಜ್​ ಒಳಗಡೆ ಹಾಕಿ, ಆರೋಪಿ ಅಲಿ ಮನೆಯನ್ನು ಹೊರಗಿನಿಂದ ಲಾಕ್​ ಮಾಡಿ, ಅಲ್ಲಿಂದ ಪರಾರಿಯಾಗಿದ್ದ. ಸದ್ಯ ಆರೋಪಿ ಮತ್ತು ಸಿದ್ದಿಖ್​ ಪತ್ನಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net