‘ರಾಬರ್ಟ್’ಗೆ ಸಂತೋಷ್​; 'ವಕೀಲ್​ ಸಾಬ್​'ಗೆ ಭೂಮಿಕಾ

Robert - Final
Published on

ಬೆಂಗಳೂರು: ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರವು 25 ದಿನಗಳನ್ನು ಮುಗಿಸಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಮಧ್ಯೆ, ಚಿತ್ರವು ಪ್ರಮುಖ ಚಿತ್ರಮಂದಿರವಾದ ಸಂತೋಷ್‌ನಿಂದ ಎತ್ತಂಗಡಿಯಾಗಲಿದೆ ಎಂಬ ವಿಷಯ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ, ನಿರ್ಮಾಪಕ ಉಮಾಪತಿ ಗೌಡ ಅವರೇ ಚಿತ್ರವು ಎತ್ತಂಗಡಿಯಾಗುವುದಿಲ್ಲ ಮತ್ತು ಇನ್ನಷ್ಟು ದಿನಗಳ ಕಾಲ ಪ್ರದರ್ಶನವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ 09ರಂದು ಪವನ್ ಕಲ್ಯಾಣ್ ಅಭಿನಯದ ತೆಲುಗು ಚಿತ್ರ ‘ವಕೀಲ್ ಸಾಬ್’ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಭೂಮಿಕಾದಲ್ಲಿ ಬಿಡುಗಡೆಯಾಗುತ್ತಿದೆ ಎಂದು ಜಾಹೀರಾತಿನಲ್ಲಿ ನಮೂದಾಗಿದೆಯಾದರೂ, ಸಂತೋಷ್‌ನಲ್ಲಿ ಬಿಡುಗಡೆಯಾಗುತ್ತಿದೆ ಎಂಬ ತಪ್ಪುಕಲ್ಪನೆಯಿಂದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಚಿತ್ರವೊಂದನ್ನು ಕಿತ್ತು, ತೆಲುಗು ಚಿತ್ರವೊಂದಕ್ಕೆ ಕೊಡುವ ಔಚಿತ್ಯವೇನು ಎಂಬ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿ ಕೇಳಿಬಂದಿತ್ತು.

ಇನ್ನೇನು ಇದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವಾಗಬೇಕು ಎನ್ನುವಷ್ಟರಲ್ಲಿ, ‘ವಕೀಲ್ ಸಾಬ್’ ಚಿತ್ರವನ್ನು ವಿತರಣೆ ಮಾಡುತ್ತಿರುವ ಕಾರ್ತಿಕ್ ಗೌಡ ಮುಂದೆ ಬಂದು, ತಪ್ಪುಕಲ್ಪನೆಯಿಂದ ಇಷ್ಟೆಲ್ಲ ಆಗಿದೆ ಎಂದರು. ‘ರಾಬರ್ಟ್’ ನಿರ್ಮಾಪಕ ಉಮಾಪತಿ ಗೌಡ, ಚಿತ್ರವು ಸಂತೋಷ್ ಚಿತ್ರಮಂದಿರದಲ್ಲೇ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ ಮೇಲೆ ಪ್ರಕರಣ ಬಗೆಹರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net