ಶಾಸಕರ ಪುತ್ರನ ಮೇಲೆಯೇ ಹಲ್ಲೆ; ಕಾರನ್ನು ಹಿಂಬಾಲಿಸಿಕೊಂಡು ಬಂದು ಕಪಾಳಕ್ಕೆ ಹೊಡೆದರು!?

Car
Published on

ತುಮಕೂರು: ಶಾಸಕರೊಬ್ಬರ ಮಗನ ಮೇಲೆಯೇ ಹಲ್ಲೆ ಆಗಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಶಾಸಕರ ಪುತ್ರನನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದು, ಅಡ್ಡಗಟ್ಟಿ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ತುರುವೇಕೆರೆ ಶಾಸಕ, ರಾಜ್ಯ ಮಸಾಲೆ ಪದಾರ್ಥ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಸಾಲಾ ಜಯರಾಂ ಪುತ್ರ ತೇಜು ಮೇಲೆ ದಾಳಿಗೆ ಸಂಚು ಹಾಕಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗುಬ್ಬಿ ತಾಲೂಕು ನೆಟ್ಟಿಕೆರೆ ಕ್ರಾಸ್ ಬಳಿ ಕಾರಿನಲ್ಲಿ ಹಿಂಬಾಲಿಸಿಕೊಂಡ ಬಂದ ಹಂತಕರ ಗುಂಪು, ಶಾಸಕರ ಪುತ್ರನಿದ್ದ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಸ್ಥಳೀಯರು ತಕ್ಷಣ ಧಾವಿಸಿ ತೇಜುವನ್ನು ರಕ್ಷಿಸಿದ್ದಾರೆ.

ಶಾಸಕರ ಪುತ್ರ ಅವರ ಕಾರಿನಲ್ಲಿ ಬೆಂಗಳೂರಿನಿಂದ ತುರುವೇಕೆರೆಯ ಅಂಕಲಕೊಪ್ಪ ಗ್ರಾಮಕ್ಕೆ ಬರುತ್ತಿದ್ದರು ಎನ್ನಲಾಗಿದೆ. ವೀರಣ್ಣಗುಡಿ ಗ್ರಾಮದ ರಾಮ, ಅವ್ವೇರಹಳ್ಳಿ ಗ್ರಾಮದ ಕೃಷ್ಣ, ಧನಂಜಯ್ಯ ಸೇರಿ ಹಲವರಿಂದ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಸಿ.ಎಸ್.ಪುರ ಪೊಲೀಸರು ಅವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳು ಶಾಸಕರ ಪುತ್ರ ತೇಜುವಿನ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದು, ರಾಜಕೀಯ ವೈಷಮ್ಯಕ್ಕೆ ಗಲಾಟೆ ನಡೆದಿರುವ ಸಾಧ್ಯತೆ ಇದೆ. ಆರೋಪಿಗಳು ಜೆಡಿಎಸ್ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ‌ ಬೆಂಬಲಿಗರೆಂಬ ಮಾತುಗಳೂ ಕೇಳಿಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net