

ಚಂಡೀಗಢ: ಗಂಡು ಮಗು ಹುಟ್ಟಲಿಲ್ಲ ಎನ್ನುವ ನೋವಿನಿಂದ ತಾಯಿಯೊಬ್ಬಳು ತನ್ನ ನಾಲ್ಕು ಹೆಣ್ಣು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದ ಪ್ರಕರಣದಲ್ಲಿ ಇದೀಗ ತಾಯಿಯನ್ನು ಬಂಧಿಸಲಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಪ್ರಕರಣದ ಆರೋಪಿಯನ್ನು ಇದೀಗ ಸೆರೆ ಹಿಡಿಯಲಾಗಿದೆ.
2020ರ ನವೆಂಬರ್ನಲ್ಲಿ ಹರಿಯಾಣದ ನುಹ್ ಜಿಲ್ಲೆಯ ವಾಸಿ ಖುರ್ಷಿದ್ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆಂದು ಹೋಗಿದ್ದ. ಹೆಂಡತಿ ಫರ್ಮೀನಾ ಮತ್ತು ನಾಲ್ಕು ಹೆಣ್ಣ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ. ಈ ವೇಳೆಯಲ್ಲಿ ಫರ್ಮೀನಾ ಒಂದು ಕೆಟ್ಟ ನಿರ್ಧಾರ ಮಾಡಿದ್ದಾಳೆ. ತನ್ನ ಆರು, ನಾಲ್ಕು, ಮೂರು ಮತ್ತು ಒಂದು ವರ್ಷದ ಹೆಣ್ಣು ಮಕ್ಕಳ ಗಂಟಲನ್ನು ಚಾಕುವಿನಿಂದ ಕೊಯ್ದಿದ್ದಾಳೆ. ಅಪ್ರಾಪ್ತ ಹೆಣ್ಣ ಮಕ್ಕಳು ಅಮ್ಮಾ ಎಂದು ಕೂಗುತ್ತಲೇ ಪ್ರಾಣ ಬಿಟ್ಟಿದ್ದಾರೆ.
ಮೃತ ಮಕ್ಕಳನ್ನು ಹಾಗೆಯೇ ಬಿಟ್ಟ ತಾಯಿ, ನಂತರ ತನ್ನ ಕುತ್ತಿಗೆಯನ್ನೂ ಚಾಕುವಿನಿಂದ ಕೊಯ್ದುಕೊಂಡಿದ್ದಾಳೆ. ಅಷ್ಟರಲ್ಲಿ ಗಂಡ ಮನೆಗೆ ವಾಪಾಸಾಗಿದ್ದಾನೆ. ಬಾಗಿಲು ಒಳಗಿನಿಂದ ಚಿಲಕ ಹಾಕಿದ್ದರಿಂದಾಗಿ ಊರವರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋಗಲಾಗಿದೆ. ಹೆಂಡತಿಯೊಬ್ಬಳೇ ಬದುಕಿರುವುದನ್ನು ಕಂಡು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರ್ಮೀನಾ ಸೋಮವಾರದಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಳೆ. ಮಕ್ಕಳನ್ನು ತಾನೇ ಕೊಂದಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. (ಏಜೆನ್ಸೀಸ್)