ಟ್ಯೂಷನ್​ಗೆ ಬಂದ 11 ವರ್ಷದ ಬಾಲಕಿಯ ಮೇಲೆರಗಿದ ಕಾಮುಕನ ಬಂಧನ

childabuse
Published on

ಚೆನ್ನೈ: ಹೆಣ್ಣುಮಕ್ಕಳನ್ನು ಎಷ್ಟು ಜೋಪಾನ ಮಾಡಿದರೂ ಸಾಲದು ಎನ್ನುವುದಕ್ಕೆ ಉದಾಹರಣೆ ಈ ಘಟನೆ. ಚೆನ್ನಾಗಿ ಪರಿಚಯ ಇರುವವರೇ ಮೈಮೇಲೆ ಎರಗಿದರೆ ಏನು ಮಾಡೋದು, ಹೇಳಿ! ಗೆಳತಿಯ ಮನೆಗೆ ಟ್ಯೂಷನ್​ಗೆಂದು ಹೋದ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆದಿರುವ ಹೀನಾಯ ಘಟನೆ ಚೆನ್ನೈನಿಂದ ವರದಿಯಾಗಿದೆ.

ಚೆನ್ನೈ ನಗರದಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತನ್ನ ಸಹಪಾಠಿಯ ತಂದೆಯ ಬಳಿ ಟ್ಯೂಷನ್​ಗೆ ಹೋಗುತ್ತಿದ್ದಳು. ಕಳೆದ ವಾರ ಹೀಗೇ ಟ್ಯೂಷನ್ ಕ್ಲಾಸಿಗೆ ಹೋಗಿದ್ದ ಆಕೆ ಅತ್ತುಕೊಂಡು ಮನೆಗೆ ಬಂದಿದ್ದಾಳೆ. ಗುಪ್ತಾಂಗದಲ್ಲಿ ರಕ್ತ ಬರುವಂತೆ ಗಾಯವಾಗಿದ್ದ ಬಾಲಕಿಯನ್ನು ಪಾಲಕರು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಲೈಂಗಿಕ ಶೋಷಣೆ ನಡೆದಿರುವುದನ್ನು ದೃಢಪಡಿಸಿದ ವೈದ್ಯರು ಚೈಲ್ಡ್ ಹೆಲ್ಪ್​ಲೈನ್​ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ವಿಚಾರಣೆ ನಡೆಸಿದ ಪೊಲೀಸರು ತನ್ನ ಮಗಳ ಸಹಪಾಠಿಯೂ ಆದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಶೋಷಣೆ ಮಾಡಿದ 44 ವರ್ಷದ ಗಂಡಸನ್ನು ಬಂಧಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net