

ಕಲ್ಪೆಟ್ಟ: ಮದುವೆ ಬಳಿಕ ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಶೀದ್ (41) ಎಂದು ಗುರುತಿಸಲಾಗಿದೆ. ಈತ ಚಿನ್ನಾಭರಣ ದೋಚಲೆಂದೇ ಮದುವೆ ಆಗುತ್ತಿದ್ದ.
ಇತ್ತೀಚೆಗಷ್ಟೇ ವಿವಾಹವಾದ ಬಳಿಕ ಮಾನಂತವಾಡಿಯ ಪಿಲಕಾವುನಲ್ಲಿರುವ ವಧುವಿನ ಮನೆಯಲ್ಲಿ ವಾಸವಿದ್ದ ವೇಳೆ ವೈತಿರಿ ಪೊಲೀಸರು ಆರೋಪಿ ರಶೀದ್ನನ್ನು ಬಂಧಿಸಿದ್ದಾರೆ. ಸುಮಾರು 10 ಮಹಿಳೆಯರನ್ನು ಮದುವೆಯಾಗಿ ಈತ ವಂಚನೆ ಮಾಡಿರುವುದಾಗಿ ವರದಿಯಾಗಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ಈತ ವಂಚಿಸುತ್ತಿದ್ದ ಎನ್ನಲಾಗಿದೆ. ಮದುವೆಯಾದ ಕೆಲವು ತಿಂಗಳ ನಂತರ ಚಿನ್ನಾಭರಣಗಳನ್ನು ಕದಿಯುವುದು ಮತ್ತು ಬಿಟ್ಟು ಹೋಗುವುದು ಈತನ ಕಾರ್ಯ ವಿಧಾನವಾಗಿತ್ತು. ಇದಾದ ನಂತರ ರಶೀದ್ ಮುಂದಿನ ಬಲಿಪಶುವನ್ನು ಹುಡುಕಿ ಆಕೆಯನ್ನು ಮದುವೆಯಾಗಿ ವಂಚನೆ ಮುಂದುವರಿಸುತ್ತಿದ್ದ. ಅದೇ ರೀತಿ 2011ರಲ್ಲಿ ವೈತಿರಿಯಲ್ಲಿ ಮತ್ತೊಬ್ಬ ಮಹಿಳೆಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.
ಆರೋಪಿಯ ಬಗ್ಗೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ಆತನ ವಿರುದ್ಧ ಇದೇ ರೀತಿಯ ಇತರ ಪ್ರಕರಣಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವರದಿಗಳ ಪ್ರಕಾರ, ರಶೀದ್ ಕಳ್ಳತನ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾನೆ. (ಏಜೆನ್ಸೀಸ್)