ಆಸ್ಕರ್ ವಿಜೇತರಿಗೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ

Oscar
Published on

ನವದೆಹಲಿ: ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ನಡೆದ 95ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಕಾರ್ತಿಕ್​ ಗೊನ್ಸಾಲ್ವಿಸ್​ ನಿರ್ದೇಶನದ ಮತ್ತು ಗುನೀತ್​ ಮೊಂಗಾ ನಿರ್ಮಾಣದ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರಕ್ಕೆ ಮತ್ತು ಜಾಗತಿಕವಾಗಿ ವೈರಲ್ ಆಗಿರುವ ಎಸ್‌ಎಸ್ ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್​ ಪ್ರಶಸ್ತಿ ಒಲಿದು ಬಂದಿದೆ.

ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿರುವ ಈ ಎರಡೂ ತಂಡಕ್ಕೂ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡುತ್ತಾ ಇದೊಂದು ಐತಿಹಾಸಿ ಕ್ಷಣ ಎಂದು ಹೇಳಿದ್ದಾರೆ. ಆಸ್ಕರ್ ಪ್ರಶಸ್ತಿ ಪಡೆದುಕೊಂಡಿರುವ 'ದಿ ಎಲಿಫೆಂಟ್ ವಿಸ್ಪರರ್ಸ್' ಕಿರಿಚಿತ್ರ ತಂಡದ ಕೆಲಸ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಪ್ರಾಮುಖ್ಯತೆಯನ್ನು ಅದ್ಭುತವಾಗಿ ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

‘ನಾಟು ನಾಟು ನಾಟು’ ಹಾಡು ಜಾಗತಿಕವಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡಾಗಿದ್ದ, ಆಸ್ಕರ್ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಈವರೆಗೂ ಆಸ್ಕರ್​ ರೇಸ್​ನಲ್ಲಿ ಸ್ಪರ್ಧಿಸುವುದೇ ಕಷ್ಟವಾಗಿದ್ದ ಭಾರತಕ್ಕೆ, ಈ ಬಾರಿ ಎರಡು ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಆರ್​​ಆರ್​ಆರ್​ ಸಿನಿಮಾದ 'ನಾಟು ನಾಟು ನಾಟು...' ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈ ಸಾಧನೆ ಮಾಡಿದ ಸಂಪೂರ್ಣ ತಂಡಕ್ಕೆ ಶುಭಾಶಯ ಎಂದು ಟ್ವೀಟ್ ಮಾಡಿದ್ದಾರೆ.

ಗುನೀತ್ ಮೊಂಗಾ ಅವರ 'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಈ ಚಿತ್ರವು ಆನೆಗಳ ನಡುವಿನ ಅವಿನಾಭಾವ ಸಂಬಂಧವನ್ನು ಹೇಳುತ್ತದೆ. ಗುನೀತ್ ಮೊಂಗಾ ಮತ್ತು ತಂಡಕ್ಕೆ ಅಭಿನಂದನೆಗಳು ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net