ಬೇಸಿಗೆಯಲ್ಲಿ ತಂಪಾದ ಸ್ಥಳ ಹುಡುಕಿ ಬರಲಿವೆ ಹಾವುಗಳು: ಈ ಮುಂಜಾಗ್ರತಾ ಕ್ರಮಗಳು ನಿಮಗೆ ತಿಳಿದಿರಲಿ

Snakes
Published on

ನವದೆಹಲಿ: ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ತಂಪಿನ ವಾತಾವರಣ ಅರಸಿಕೊಂಡು ಹಾವುಗಳು ಜನವಸತಿ ಪ್ರದೇಶಗಳತ್ತ ಬರುವುದು ಸಾಮಾನ್ಯ. ಅತಿಯಾದ ತಾಪಮಾನದಿಂದ ಸಾಯುವ ಸಾದ್ಯತೆ ಇರುವುದರಿಂದ ತಮ್ಮ ದೇಹವನ್ನು ತಂಪು ಮಾಡಿಕೊಂಡು ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಟ್ಟಲು ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಇದೀಗ ಬಿರು ಬೇಸಿಗೆ ಆರಂಭವಾಗಿರುವುದಿಂದ ಜನರು ತುಂಬಾ ಜಾಗರೂಕರಾಗಿರಬೇಕು ಎಂಬುದು ಉರಗ ತಜ್ಞರ ಎಚ್ಚರಿಕೆಯಾಗಿದೆ.

ನಾಗರಹಾವುಗಳು ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಜತೆಯಾಗುತ್ತವೆ. ಈ ಸಮಯದಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಹಾವುಗಳು ವ್ಯಾಪಕವಾಗಿ ಕಂಡುಬರುತ್ತವೆ. ಫೆಬ್ರುವರಿ ತಿಂಗಳಿನಲ್ಲಿ ಮಂಡಲದ ಹಾವುಗಳು ಮೊಟ್ಟೆಗಳನ್ನು ಇಡುತ್ತವೆ. ಅವು ಮೊಟ್ಟೆ ಇಡಲು ತಂಪಾದ ಪ್ರದೇಶಗಳಿಗೆ ಹೋಗುತ್ತವೆ. ಆದ್ದರಿಂದ ಈ ತಿಂಗಳುಗಳಲ್ಲಿ ಹಾವುಗಳು ನಿಮ್ಮ ದೈನಂದಿನ ಜೀವನವನ್ನು ತೊಂದರೆಗೀಡುಮಾಡುವ ಸಾಧ್ಯತೆಯಿದೆ. ಹೀಗಾಗಿ ನೀವು ಕೆಲವೊಂದು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಆ ಕ್ರಮಗಳು ಈ ಕೆಳಕಂಡಂತಿವೆ.

1. ಮನೆ ಬಳಿ ಕಸದ ರಾಶಿ ಹಾಕಬೇಡಿ. ಕಸದ ರಾಶಿ ಬಿದ್ದಿರುವ ಜಾಗದಲ್ಲಿ ಹಾವುಗಳು ತಂಪು ಪಡೆಯಲು ಬರುತ್ತವೆ.

2. ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನೆರಳು ಮತ್ತು ತಂಪು ನೀಡುವ ವಸ್ತುಗಳನ್ನು ಮನೆಯ ಹೊರಂಗಾಣದಲ್ಲಿ ಸಂಗ್ರಹಿಸಿ ಇಡಬೇಡಿ. ಮನೆಯೊಳಗೆ ಸ್ವಚ್ಛತೆ ಇರಲಿ.

3. ಶೂಗಳನ್ನು ಮೊದಲು ಪರಿಶೀಲಿಸಿ ಆನಂತರ ಧರಿಸಿ

4. ರಾತ್ರಿಯ ವೇಳೆ ತುಂಬಾ ಎಚ್ಚರಿಕೆಯಿಂದ ನಡೆಯಿರಿ. ಬ್ಯಾಟರಿ ಅಥವಾ ಮೊಬೈಲ್​ ಟಾರ್ಚ್​ ಬಳಸುವುದು ಉತ್ತಮ.

5. ಹಾವು ಕಡಿತಕ್ಕೆ ಒಳಗಾಗುವ ವ್ಯಕ್ತಿಯನ್ನು ನೋಡಿ ಭಯಪಡದೇ ಸಾಧ್ಯವಾದಷ್ಟು ಬೇಗ ಅವರನ್ನು ಆಸ್ಪತ್ರೆಗೆ ದಾಖಲಿಸಿ.

ಎಲ್ಲಿಯೇ ಆಗಲಿ ಹಾವುಗಳನ್ನು ಕಂಡಾಗ ಮೊದಲ ಉರಗ ಪ್ರೇಮಿಗಳಿಗೆ ಕರೆ ಮಾಡಿ. ಹಾವುಗಳನ್ನು ಯಾವುದೇ ಕಾರಣಕ್ಕೂ ಸಾಯಿಸಬೇಡಿ. ಉರಗ ಪ್ರೇಮಿಗಳು ಬಂದು ಹಾವನ್ನು ರಕ್ಷಣೆ ಮಾಡಿ, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net