ಪೊಲೀಸರಿನ್ನು ಕ್ರಿಮಿನಲ್‌ಗಳ ಜತೆ ಪಾರ್ಟಿಗೆ ಹಾಜರಾಗುವಂತಿಲ್ಲ; ರೌಡಿ-ಗೂಂಡಾಗಳ ಸಮಾರಂಭಗಳಲ್ಲಿ ಭಾಗಿ ಆಗುವಂತಿಲ್ಲ

Police
ದಾಳಿಗೆ ಹೊರಟ ಪೊಲೀಸರಿಗೆ ಸೂಚನೆ
Published on

ಬೆಂಗಳೂರು: ರೌಡಿ, ಗೂಂಡಾಗಳು, ಕ್ರಿಮಿನಲ್‌ಗಳ ಜೊತೆ ಖಾಕಿ ಪಡೆಯ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಬೀಳ್ಕೊಡುಗೆ, ಸ್ವಾಗತ ಸಮಾರಂಭ ಆಚರಣೆಗೆ ರಾಜ್ಯ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ.

ಪೊಲೀಸರು ವರ್ಗಾವಣೆ, ಬಡ್ತಿ, ಮದುವೆ ವಾರ್ಷಿಕೋತ್ಸವ ಮತ್ತು ಹುಟ್ಟುಹಬ್ಬದ ವೇಳೆ ಅಪರಾಧ ಹಿನ್ನೆಲೆಯುಳ್ಳವರ ಅಥವಾ ರೌಡಿಗಳ ಜೊತೆಗೆ ಕೇಕ್ ಕತ್ತರಿಸಿ ಪಾರ್ಟಿ ಮಾಡುತ್ತಿರುವ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ಸಾರ್ವಜನಿಕ ವಲಯಕ್ಕೆ ತಪ್ಪು ಸಂದೇಶ ಹೋಗುತ್ತಿವೆ. ಶಿಸ್ತಿನ ಇಲಾಖೆ ಪೊಲೀಸರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪರಿಣಾಮ ಪೊಲೀಸರ ಕುರಿತು ತಪ್ಪು ಸಂದೇಶ ರವಾನೆಯಾಗುತ್ತಿದೆ. ಸಮಾಜಘಾತುಕ ವ್ಯಕ್ತಿಗಳು ಪೊಲೀಸರಿಗೆ ಆತ್ಮೀಯರು ಎಂದು ಸಾರುವಂತೆ ಬಿಂಬಿತವಾಗುತ್ತಿದೆ. ಇದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.

ಈ ರೀತಿಯ ಪರಿಪಾಠಗಳಿಗೆ ಅಂತ್ಯ ಕಾಣಿಸುವ ಹಿತದೃಷ್ಟಿಯಿಂದ ಪೊಲೀಸರಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಅಪರಾಧ ಹಿನ್ನೆಲೆಯುಳ್ಳ ಅಥವಾ ಸಮಾಜಘಾತಕ ವ್ಯಕ್ತಿಗಳು, ರೌಡಿಗಳೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಿರತಕ್ಕದ್ದಲ್ಲ. ಠಾಣೆ ಮತ್ತು ಕಚೇರಿಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಇನ್ನಿತರ ಖಾಸಗಿ ಸಮಾರಂಭ ಆಚರಣೆ ಮಾಡುವಂತಿಲ್ಲ ಎಂದು ಡಿಜಿ ಸೂಚನೆ ನೀಡಿದ್ದಾರೆ.

ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೊದಲು ಆಯೋಜಕ ವ್ಯಕ್ತಿ, ಸಂಘ-ಸಂಸ್ಥೆಯ ಪೂರ್ವಾಪರ ಚರಿತ್ರೆ ಪರಿಶೀಲನೆ ಮಾಡಿದ ನಂತರ ಸೂಕ್ತ ನಿರ್ಧರ ತೆಗೆದುಕೊಳ್ಳಬೇಕು. ಪೊಲೀಸ್ ಇಲಾಖೆಗೆ ಧಕ್ಕೆ ಆಗುವುದಿಲ್ಲ ಎಂಬುದು ಮನವರಿಕೆಯಾದ ಮೇಲೆ ಅಥವಾ ಅಪರಾಧ ತಡೆ-ಸಂಚಾರ ನಿರ್ವಹಣೆ ಉದ್ದೇಶಕ್ಕೆ ಭಾಗವಹಿಸಬಹುದು. ಆ ಕಾರ್ಯಕ್ರಮಗಳು ಸಮಾಜಕ್ಕೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ತಿಳುವಳಿಕೆ, ಸಾರ್ವಜನಿಕರ ಮತ್ತು ಪೊಲೀಸರ ಸಂಬಂಧ ವೃದ್ಧಿಸುವ ಉದ್ದೇಶ ಹೊಂದಿರಬೇಕು ಎಂದು ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ಪೊಲೀಸ್ ವೃಂದ ಮತ್ತು ಸಮುದಾಯದಲ್ಲಿ ಮನೋಸ್ಥೈರ್ಯ ಹೆಚ್ಚುವ ಸಲುವಾಗಿ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಆಚರಿಸಬಹುದು. ಅಂತಹ ಕಾರ್ಯಕ್ರಮದ ರೂಪರೇಷೆಗಳನ್ನು ಹಿರಿಯ ಅಧಿಕಾರಿಗಳು ನಿರ್ಧರಿಸಬೇಕು. ಸ್ವಾಗತ, ಬೀಳ್ಕೊಡುಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವೇಳೆ ಪೊಲೀಸರು ಹೊರತುಪಡಿಸಿ ಖಾಸಗಿ ವ್ಯಕ್ತಿಗಳು ಭಾಗವಹಿಸುವಂತಿಲ್ಲ. ಈ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಎಲ್ಲ ಜಿಲ್ಲ ವರಿಷ್ಠಾಧಿಕಾರಿಗಳು ಜಾರಿಗೆ ತರಬೇಕು ಮತ್ತು ನಿಗಾ ವಹಿಸಬೇಕೆಂದು ಡಿಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ದೇಣಿ ವಸೂಲಿ ಮಾಡುವಂತಿಲ್ಲ

ಹಿರಿಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದ ಯಾವುದೇ ಕಾರ್ಯಕ್ರಮ-ಸಮಾರಂಭಗಳ ಆಚರಣೆಗಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರಿಂದ ದೇಣಿಗೆ ವಸೂಲಿ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಡಿಜಿ ಎಚ್ಚರಿಕೆ ನೀಡಿದ್ದಾರೆ.

ರೌಡಿ-ಕ್ರಿಮಿನಲ್‌ಗಳೊಂದಿಗೆ ಬರ್ತ್‌ಡೇ ಪಾರ್ಟಿ, ಬೀಳ್ಕೊಡುಗೆ, ಸ್ವಾಗತ ಸಮಾರಂಭದಲ್ಲಿ ಪೊಲೀಸರು ಭಾಗವಹಿಸಿದರೆ ಅಂಥವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ.| ಪ್ರವೀಣ್ ಸೂದ್ ರಾಜ್ಯ ಪೊಲೀಸ್ ಮಹಾನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net