ವಿಶ್ವಕರ್ಮ ಯೋಜನೆ ಜೀವನೋಪಾಯಕ್ಕೆ ದಾರಿ

21KDR1..vishwakarma
ಕಡೂರಿನಲ್ಲಿ ಕೇಂದ್ರ ಸರ್ಕಾರದ ಪಿ.ಎಂ.ವಿಶ್ವಕರ್ಮ ಯೋಜನೆಯ ಮೊದಲ ವರ್ಷದ ವಾರ್ಷಿಕೋತ್ಸವದ ತರಬೇತಿ ಸಭೆಯನ್ನು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್.ಸಿ ಪ್ರಶಾಂತ್ ಉದ್ಘಾಟಿಸಿದರು. ಶೈಲಾ ಮೋಹನ್, ತೀರ್ಥ ಆಚಾರ್, ಗೋಪಾಲ ಆಚಾರ್ ಮತ್ತಿತರರಿದ್ದರು.
Published on

ಕಡೂರು: ಕುಶಲಕರ್ಮಿಯರಿಗೆ ಕೌಶಲ ತರಬೇತಿ ನೀಡುವ ಮೂಲಕ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಲಕ್ಷಾಂತರ ಕುಶಲಕರ್ಮಿಗಳಿಗೆ ಜೀವನೋಪಾಯಕ್ಕೆ ದಾರಿ ಮಾಡಿ ಕೊಟ್ಟಿದೆ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್.ಸಿ.ಪ್ರಶಾಂತ್ ತಿಳಿಸಿದರು.
ಪಟ್ಟಣದ ಕಾಳಿ ಕಾಂಪ್ಲೆಕ್ಸ್‌ನಲ್ಲಿ ಕೇಂದ್ರ ಸರ್ಕಾರದ ಪಿ.ಎಂ.ವಿಶ್ವಕರ್ಮ ಯೋಜನೆಯ ಮೊದಲ ವರ್ಷದ ವಾರ್ಷಿಕೋತ್ಸವದ ತರಬೇತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಪಿ.ಎಂ. ವಿಶ್ವಕರ್ಮ ಯೋಜನೆ ಕೇಂದ್ರೀಯ ಯೋಜನೆಯಾಗಿದ್ದು ಇದು ಕುಶಲಕರ್ಮಿಗಳಿಗೆ ಅವರ ಕುಲ ಕಸುಬುಗಳನ್ನು ಆಧರಿಸಿ ತರಬೇತಿ ನೀಡುವುದರ ಮೂಲಕ ಉಚಿತ ಸಾಲ, ಕೌಶಲ್ಯ ತರಬೇತಿ, ಆಧುನಿಕ ಉಪಕರಣಗಳು, ಡಿಜಿಟಲ್ ವಹಿವಾಟು ಮತ್ತು ಮಾರುಕಟ್ಟೆಗೆ ಅವರು ತಯಾರಿಸಿರುವ ವಸ್ತುಗಳನ್ನು ತಂದು ಮಾರಾಟ ಮಾಡಲು ಪ್ರೋತ್ಸಾಹಿಸುವ ಮೂಲಕ ಕುಶಲಕರ್ಮಿರನ್ನು ಬೆಂಬಲಿಸುವ ಮಹತ್ವದ ಯೋಜನೆಯಾಗಿದೆ ಎಂದರು.
ರುಮನ್ ತರಬೇತಿ ಕೇಂದ್ರದ ನಿರ್ದೇಶಕಿ ಶೈಲಾ ಮೋಹನ್ ಮಾತನಾಡಿ, ಇಲ್ಲಿ ತರಬೇತಿ ಪಡೆದ ಸುಮಾರು 500ಕ್ಕೂ ಹೆಚ್ಚಿನವರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯು ಕುಶಲಕರ್ಮಿಯರಿಗೆ ವರದಾನವಾಗಿದ್ದು ತಾವು ಕಲಿತಿರುವ ಕುಲ ಕಸುಬುಗಳನ್ನು ಮತ್ತೊಮ್ಮೆ ಗುರುತಿಸಿ ಸಾಲ ನೀಡುವುದರ ಮೂಲಕ ಜೀವನ ರೂಪಿಸಿಕೊಳ್ಳಲು ಸಹಾಯಕ ಎಂದು ತಿಳಿಸಿದರು.
ಇಲ್ಲಿ ತರಬೇತಿ ಪಡೆದ ಸಾವಿರಾರು ಕುಶಲಕರ್ಮಿಯರಲ್ಲಿ ತರೀಕೆರೆ ತಾಲೂಕಿನ ಕೆ.ಹೊಸೂರಿನ ಎಚ್.ಡಿ. ಶಿವಕುಮಾರ್ ಮತ್ತು ಕಡೂರು ತಾಲೂಕಿನ ಅಲಘಟ್ಟ ಗ್ರಾಮದ ಪರ್ವತಾಚಾರ್ ಅತ್ಯುತ್ತಮ ಕೌಶಲ ನೀಡಿ ಬೆಂಗಳೂರಿನ ಎಂಎಸ್‌ಎಂಇ ಸಂಸ್ಥೆ ನಡೆಸಿದ ಕೌಶಲ್ಯ ತರಬೇತಿಯಲ್ಲಿ ಪಾಲ್ಗೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ದೆಹಲಿಯಲ್ಲಿ ನಡೆಯುವ ಪಿ.ಎಂ.ವಿಶ್ವಕರ್ಮ ಯೋಜನೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಲು ಮುಂದಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಮಹಾ ಸಭಾದ ಯುವ ಘಟಕದ ಅಧ್ಯಕ್ಷ ಎಸ್.ಡಿ.ಗೋಪಾಲಚಾರ್, ಕಡೂರು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ತೀರ್ಥಾಚಾರ್ ಮತ್ತು ಮಹೇಶ್‌ಆಚಾರ್ ಹಾಗೂ ತರಬೇತುದಾರ ಹರಿಪ್ರಸಾದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net