ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂಗಳ ಸಭೆಯಲ್ಲಿ ಮಮತಾ ಕ್ಯಾತೆ

Narendra-Modi-Mamata-Banerjee
Narendra-Modi-Mamata-Banerjee
Published on

ನವದೆಹಲಿ: ಕರೊನಾ ಹಾವಳಿ ತಡೆಯುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸೊಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂದಿನಂತೆ ನಾನಾ ವಿಷಯಗಳಲ್ಲಿ ತಗಾದೆ ತೆಗೆದರು.

‘‘ನಾವು ವೈರಸ್ ತಡೆಯಲು ಏನೇನು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದೇವೆ. ನಮ್ಮ ರಾಜ್ಯಕ್ಕೆ ಹತ್ತಿಕೊಂಡು ಅಂತಾರಾಷ್ಟ್ರೀಯ ಗಡಿ ಇದೆ. ಅಲ್ಲದೆ ದೊಡ್ಡ ರಾಜ್ಯಗಳ ಗಡಿ ಇದೆ. ಜನರನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ. ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ಕೇಂದ್ರ ಸರ್ಕಾರ ‘ರಾಜಕೀಯ’ ಮಾಡಬಾರದು’’ ಎಂದು ಮಮತಾ ಹೇಳಿದರು.

‘‘ಎಲ್ಲ ರಾಜ್ಯಗಳಿಗೂ ಸಮಾನ ಮಹತ್ವ ನೀಡಬೇಕು. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು’’ ಎಂದು ಆಗ್ರಹಿಸಿದರು.

ಪಶ್ಚಿಮ ಬಂಗಾಳವು ಕರೊನಾ ನಿರ್ವಹಿಸುತ್ತಿರುವ ರೀತಿ ಸರಿಯಿಲ್ಲ ಕೇಂದ್ರ ಸರ್ಕಾರ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿತ್ತು. ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ಅಲ್ಲಿ ಪರೀಕ್ಷೆಗೆ ಒಳಪಡಿಸುತ್ತಿರುವವರ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

ಇದಕ್ಕೆ ರಾಜ್ಯ ಸರ್ಕಾರ ಉತ್ತರಿಸಿ, ‘ಆರಂಭಿಕ ಹಂತದಲ್ಲಿ ಪರೀಕ್ಷೆಗೆ ಅಗತ್ಯವಿರುವ ಮೂಲಕಸೌಕರ್ಯಗಳ ಕೊರತೆ ಇತ್ತು. ಹೀಗಾಗಿ ಸಾಯುವವರ ಸಂಖ್ಯೆ ಹೆಚ್ಚಾಯಿತು’’ ಎಂದು ಸಮಜಾಯಿಷಿ ನೀಡಿತ್ತು.

ಬಾಂಗ್ಲಾದೇಶಕ್ಕೆ ಭಾರತ ಕಳಿಸುತ್ತಿರುವ ಔಷಧ ಮತ್ತಿತರ ಪರಿಕರಗಳ ಸಾಗಾಣಿಕೆಗೂ ಪಶ್ಚಿಮ ಬಂಗಾಳ ಸರ್ಕಾರ ಅಡ್ಡಿ ಉಂಟು ಮಾಡುತ್ತಿದೆ, ಇದರಿಂದ ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದೂ ಕೇಂದ್ರ ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು.

ಇದೆಲ್ಲದರ ಹಿನ್ನೆಲೆಯಲ್ಲಿ ನೋಡಿದರೆ, ಇಂದು ಮಮತಾ ಬ್ಯಾನರ್ಜಿ ಅವರು ಸಿಎಂಗಳ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾಡಿರುವ ಟೀಕೆ ಅದಕ್ಕೆ ಪೂರಕವಾಗಿಯೇ ನೀಡಿರುವ ರಾಜಕೀಯ ಹೇಳಿಕೆಯಂತಿದೆ.

ಇದಕ್ಕೆ ಮುನ್ನ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರೊನಾ ವೈರಸ್ ಹಾವಳಿ ತಡೆಯಲು ನಡೆಸುತ್ತಿರುವ ಈ ಹೋರಾಟದಲ್ಲಿ ಇಡೀ ವಿಶ್ವವೇ ನಮ್ಮ ಪ್ರಯತ್ನವನ್ನು ಮತ್ತು ಯಶಸ್ಸನ್ನು ಕೊಂಡಾಡುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರಗಳು ಬಹು ಮಹತ್ವದ ಪಾತ್ರ ನಿಭಾಯಿಸಿವೆ. ತಮ್ಮ ಹೊಣೆಗಾರಿಕೆ ಏನು ಎಂಬುದನ್ನು ಅರಿತು ಆ ಪ್ರಕಾರ ನಡೆದುಕೊಂಡಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘‘ಜನ ಎಲ್ಲಿದ್ದಾರೋ ಅಲ್ಲೇ ಇರಬೇಕು ಎಂಬುದಾಗಿ ನಾವು ಹೇಳಿದ್ದೆವು. ಆದರೆ ಕಷ್ಟ ಕಾಲದಲ್ಲಿ ತನ್ನ ಮನೆಗೆ ಹೋಗುವುದು ಮನುಷ್ಯನ ಮೂಲ ಸ್ವಭಾವಗಳಲ್ಲೊಂದು. ಆದ್ದರಿಂದಲೇ ನಾವು ನಮ್ಮ ನೀತಿ-ನಿರ್ಧಾರಗಳಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡೆವು. ಅದೇ ವೇಳೆ, ಕರೊನಾ ವೈರಸ್ ಹಳ್ಳಿಗಳಿಗೂ ಹರಡದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಅದು ದೊಡ್ಡ ಸವಾಲೂ ಹೌದು’’ ಎಂದು ಮೋದಿ ಹೇಳಿದರು.

ಇದು ಕರೊನಾಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜತೆಗಿನ ಮೋದಿಯವರ ಐದನೇ ವಿಡಿಯೋ ಕಾನ್ಫರೆನ್ಸ್. ಈ ಸಭೆಯಲ್ಲಿ 19ನೇಯವರಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಲಿದ್ದಾರೆ. ಪ್ರತಿಯೊಬ್ಬ ಸಿಎಂಗೂ ತಲಾ 20 ನಿಮಿಷ ಮಾತನಾಡಲು ಅವಕಾಶ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net