ಹೊಸ ಮಸೂದೆಯಿಂದ ಪ್ರಧಾನ ಮಂತ್ರಿಗೆ ವಿನಾಯತಿ ನೀಡಬೇಕೆಂಬ ಸಲಹೆಯನ್ನು ನಿರಾಕರಿಸಿದ್ದರಂತೆ ಪಿಎಂ ಮೊದಿ! | Kiren Rijiju

Kiren Rijiju
Published on

Kiren Rijiju: ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಬಂಧನದಲ್ಲಿರುವ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ತೆಗೆದುಹಾಕುವ ಪ್ರಸ್ತಾವಿತ ಮಸೂದೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ ಎಂಬ ಅಚ್ಚರಿಯ ವಿಷಯವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಬಹಿರಂಗಗೊಳಿಸಿದ್ದಾರೆ.

ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿಯನ್ನು ಈ ನಿಬಂಧನೆಯಿಂದ ಹೊರಗಿಡಬೇಕೆಂಬ ಸಲಹೆ ಅನೇಕರಿಂದ ವ್ಯಕ್ತವಾಗಿತ್ತು, ಆದರೆ, ಪ್ರಧಾನಿ ಮೋದಿ ಅದನ್ನು ನಿರಾಕರಿಸಿದರು ಎಂದು ರಿಜಿಜು ತಿಳಿಸಿದ್ದಾರೆ. ಪ್ರಧಾನಿ ಕೂಡ ಒಬ್ಬ ನಾಗರಿಕನಾಗಿದ್ದು ಇಂತಹ ಗಂಭೀರ ವಿಷಯದಲ್ಲಿ ವಿಶೇಷ ರಕ್ಷಣೆ ನೀಡಬಾರದು ಎಂದು ತಿಳಿಸಿರುವುದಾಗಿ ರಿಜಿಜು ಮಾಹಿತಿ ನೀಡಿದರು. ಅನೇಕ ರಾಜ್ಯಗಳಲ್ಲಿ ನಮ್ಮ ಪಕ್ಷದ ಮುಖ್ಯಮಂತ್ರಿಗಳೇ ಆಡಳಿತ ನಡೆಸುತ್ತಿದ್ದು, ನಮ್ಮ ನಾಯಕರೇ ತಪ್ಪು ಮಾಡಿದರೂ  ತಮ್ಮ ಹುದ್ದೆಗಳಿಂದ ಕೆಳಗಿಳಿಯಬೇಕಾಗುತ್ತದೆ ಎಂದರು.

ನೂತನ ಮಸೂದೆ

ಈ ವಾರದ ಆರಂಭದಲ್ಲಿ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನು ಮಂಡಿಸಿದ ನಂತರ ಈ ಹೇಳಿಕೆಗಳು ಬಂದಿವೆ - ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ, 2025, ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025, ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ (ತಿದ್ದುಪಡಿ) ಮಸೂದೆ, 2025.

ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧಕ್ಕೆ ಸಂಬಂಧಿಸಿದಂತೆ ಪ್ರಧಾನಿ, ಯಾವುದೇ ಕೇಂದ್ರ ಸಚಿವರು ಅಥವಾ ರಾಜ್ಯದ ಮುಖ್ಯಮಂತ್ರಿಯನ್ನು ಕನಿಷ್ಠ 30 ದಿನಗಳ ಕಾಲ ಬಂಧನದಲ್ಲಿಟ್ಟರೆ, ಆ ವ್ಯಕ್ತಿಯು 31 ನೇ ದಿನದಂದು ಸ್ವಯಂಚಾಲಿತವಾಗಿ ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ ಎಂದು ಮಸೂದೆಗಳು ಹೇಳುತ್ತವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net