ಸೆ.1ರಂದು ಆಯಿಷ್‌ಗೆ ರಾಷ್ಟ್ರಪತಿ: ಅಗತ್ಯ ಸಿದ್ಧತೆ

draupadi murmu
Published on

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.1ರಂದು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿದ್ದಾರೆ. ಈ ಸಂಬಂಧ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.

ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕು. ರಾಷ್ಟ್ರಪತಿ ಅವರು ನಗರದ ರ‌್ಯಾಡಿಷನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡುವರು. ಈ ಸಂಬಂಧ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರಪತಿ ಅವರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವ ಜತೆಯಲ್ಲಿ ಯಾವುದೇ ಘಟನೆಗಳಿಗೆ ಅವಕಾಶ ನೀಡಬಾರದು. ಅವರು ಸಂಚರಿಸುವ ರಸ್ತೆ ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು. ರಿಂಗ್ ರೋಡ್, ಆಯಿಷ್‌ನಿಂದ ರಾಡಿಷನ್ ಬ್ಲೂ ಹೋಟೆಲ್‌ವರೆಗಿನ ರಸ್ತೆಗಳು ಸ್ವಚ್ಛತೆ ಕಾಯ್ದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪಾಲಿಕೆ, ಎಂಡಿಎ, ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದ ಅಧಿಕಾರಿಗಳು ಈ ಜವಾಬ್ದಾರಿ ವಹಿಸಬೇಕು ಎಂದು ನಿರ್ದೇಶಿಸಿದರು.

ರಾಷ್ಟ್ರಪತಿ ಅವರಿಗೆ ಶಿಷ್ಟಾಚಾರದಂತೆ ವೈದ್ಯಕೀಯ ವ್ಯವಸ್ಥೆ ಒದಗಿಸುವುದು ಆರೋಗ್ಯ ಇಲಾಖೆ ಜವಾಬ್ದಾರಿ. ಸೂಕ್ತ ವ್ಯವಸ್ಥೆಯುಳ್ಳ ಆಂಬುಲೆನ್ಸ್, ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಬೇಕು ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜ, ಡಿಸಿಪಿ ಸುಂದರ ರಾಜ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net