

PM Modi : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಹಮದಾಬಾದ್ಗೆ ಆಗಮಿಸಿ, ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ದುರಂತಗಳಲ್ಲಿ ಒಂದಾದ, 241 ಪ್ರಯಾಣಿಕರನ್ನು ಹಾಗೂ 24 ವಿದ್ಯಾರ್ಥಿಗಳನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕನನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಮೇಘನಿನಗರದ ವಿಮಾನ ಪತನದ ಸ್ಥಳಕ್ಕೆ ನೇರವಾಗಿ ಕಾರಿನಲ್ಲಿ ಹೋದರು. ಈ ವೇಳೆ ಮೋದಿ ಅವರ ಜತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಇದ್ದರು. ಪತನದ ಸ್ಥಳವನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಗುಜರಾತ್ ಮುಖ್ಯಮಂತ್ರಿಯಾಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರಧಾನಿ ಮೋದಿ, ಈ ದುರಂತದಿಂದ "ದಿಗ್ಭ್ರಮೆಗೊಂಡಿದ್ದೇನೆ" ಎಂದು ಘಟನೆ ನಡೆದ ಬೆನ್ನಲ್ಲೇ ಟ್ವೀಟ್ ಮೂಲಕ ದುಃಖ ವ್ಯಕ್ತಪಡಿಸಿದರು. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕವಾಗಿದೆ. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ದುರಂತದಿಂದ ಬಾಧಿತರಾದ ಪ್ರತಿಯೊಬ್ಬರೊಂದಿಗೂ ಇದೆ. ಸಂತ್ರಸ್ತರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿರುವ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದರು.
ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಅಪಘಾತದ ತನಿಖೆಗಾಗಿ ಕೇಂದ್ರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಶ್ರೀ ಕಿಂಜರಪು ಹೇಳಿದರು.
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದೆ. ಗುರುವಾರ (ಜೂನ್ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.
* ಎಲ್ಲಿ ದುರಂತ?: ಅಹಮದಾಬಾದ್ನ ಮೇಘಾನಿ ನಗರ
* ಎಷ್ಟೊತ್ತಿಗೆ?: ಗುರುವಾರ ಮಧ್ಯಾಹ್ನ 1.38
* ಯಾವ ವಿಮಾನ?: ಏರ್ ಇಂಡಿಯಾ ಎ1-171
* ಎಲ್ಲಿಗೆ ಹೊರಟಿತ್ತು?: ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣ
* ಪತನಕ್ಕೆ ಕಾರಣ?: ಪ್ರಾಥಮಿಕ ತನಿಖೆ ಪ್ರಕಾರ ಇಂಜಿನ್ನಲ್ಲಿ ತಾಂತ್ರಿಕ ದೋಷ
* 32 ಸೆಕೆಂಡ್: ಟೇಕ್ ಆಫ್ ಆದ 32 ಸೆಕೆಂಡ್ನಲ್ಲಿ ಪತನ
* 230 ಪ್ರಯಾಣಿಕರು, 12 ಸಿಬ್ಬಂದಿ
* 169-ಭಾರತೀಯರು
* 52 -ಬ್ರಿಟಿಷ್ ಪ್ರಜೆಗಳು
* 7- ಪೋರ್ಚುಗಲ್ ಪ್ರಜೆಗಳು
* 1-ಓರ್ವ ಕೆನಡಾ ನಾಗರಿಕ