

ಚಿತ್ರದುರ್ಗ: ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕರ್ನಾಟಕವನ್ನು ನಂ.1 ಮಾಡುವ ನೀಲನಕ್ಷೆಯಾಗಿದೆ ಎಂದು ಪ್ರಧಾನಿ ಮೋದಿ ಅವರು ಹೊಗಳಿದರು.
ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಭಾರತ್ ಮಾತಾಕೀ ಜೈ ಎನ್ನುವ ಮೂಲಕ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಮದಕರಿ ನಾಯಕ ಹಾಗೂ ಒನಕೆ ಓಬ್ಬವ್ವ ಅವರ ನಾಡಿನ ಚಿತ್ರದುರ್ಗದ ಜನತೆಗೆ ನನ್ನ ನಮಸ್ಕಾರಗಳು ಎನ್ನುವ ಮೂಲಕ ಇಬ್ಬರು ಮಹಾನ್ ವ್ಯಕ್ತಿಗಳನ್ನು ನೆನೆದರು. ಚಿತ್ರದುರ್ಗದ ವೀರ ಜನತೆಗೆ ನನ್ನ ಪ್ರಣಾಮಗಳು ಎಂದು ಪ್ರಧಾನಿ ಮೋದಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪುನರುಚ್ಛರಿಸಿದರು.
ಎಲ್ಲಿ ನೋಡಿದರು ಲಕ್ಷ ಲಕ್ಷಗಟ್ಟಲೇ ಜನರು ಕಾಣಿಸುತ್ತಿದ್ದಾರೆ. ಕರ್ನಾಟಕದ ಜನರು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಸರ್ಕಾರ ಎಂದು ನಿರ್ಧಾರ ಮಾಡಿದ್ದಾರೆ. ಬಿಜೆಪಿಯನ್ನು ಆಶೀರ್ವದಿಸಲು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಅಜಾದಿ ಕಾ ಅಮೃತ ಮಹೋತ್ಸವದ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ಮೊದಲ ಚುನಾವಣೆ ಇದಾಗಿದೆ. ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯ ಮಾಡುವ ಚುನಾವಣೆ ಇದಾಗಿದೆ. ಇದು ಮುಂದಿನ 25 ವರ್ಷಗಳ ಕರ್ನಾಟಕದ ಅಭಿವೃದ್ಧಿಯ ಚುನಾವಣೆ ಎಂದು ಪ್ರಧಾನಿ ಮೋದಿ ಹೇಳಿದರು.
ಕರ್ನಾಟಕದ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿಯ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಈ ಬಾರಿ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆ ಮಾಡಬೇಕು. ಕರ್ನಾಟಕವನ್ನು ಅಭಿವೃದ್ಧಿಯ ಮೆಶಿನ್ ಮಾಡಬೇಕು ಎಂದು ಪ್ರಧಾನಿ ಮೋದಿ ಕರ್ನಾಟಕ ಬಿಜೆಪಿಯ ಪ್ರಣಾಳಿಕೆಯನ್ನು ಹೊಗಳಿದರು. ಬಿಜೆಪಿ ಪ್ರಣಾಳಿಕೆ ಕರ್ನಾಟಕವನ್ನು ನಂ.1 ಮಾಡುವ ನೀಲನಕ್ಷೆಯಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸದ ಹಾದಿಯ ಪ್ರಣಾಳಿಕೆಯಾಗಿದೆ.
ಕಾಂಗ್ರೆಸ್-ಜೆಡಿಎಸ್ ಪಕ್ಷ ಬೇರೆಯಾದರೂ ಇಬ್ಬರ ಹೃದಯ ಒಂದೇ. ಅವರು ಕುಟುಂಬ ಪ್ರಗತಿಯತ್ತ ಮಾತ್ರ ಲಕ್ಷ್ಯ ವಹಿಸುತ್ತಾರೆ. ಭದ್ರಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯವೇ ಅವರ ವೈಫಲ್ಯವನ್ನು ತೋರಿಸುತ್ತಿದೆ. ಆ ಯೋಜನೆ ಪೂರ್ಣಗೊಳಿಸಲು ನಾನು 5,300 ಕೋಟಿ ಅನುದಾನ ನೀಡಿದ್ದೇನೆ. ಅದರಿಂದ ಈ ಭಾಗದ ಜನರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ. ಇಲ್ಲಿಯವರೆಗೆ ಕಾಂಗ್ರೆಸ್-ಜೆಡಿಎಸ್ ಅಧಿಕಾರದಲ್ಲಿದ್ದಾಗ ಯೋಜನೆಗಳು ನಿಧಾನಗತಿಯಲ್ಲಿ ಇದ್ದವು. ಡಬಲ್ ಎಂಜಿನ್ ಸರ್ಕಾರ ಬಂದ ತಕ್ಷಣ ಯೋಜನೆಗಳಿಗೆ ವೇಗ ಬಂದಿದೆ ಎಂದರು.
ಕಾಂಗ್ರೆಸ್ ಹತ್ತು ವರ್ಷಗಳ ಕಾಲ ಮಾಡ್ಡಿದ್ದಕಿಂತ ಅತಿ ಹೆಚ್ಚು ಮೆಡಿಕಲ್ ಕಾಲೇಜು ಆರಂಭಿಸಿದ್ದೇವೆ. ರಾಜ್ಯದಲ್ಲಿ ಅನೇಕ ನರ್ಸಿಂಗ್ ಕಾಲೇಜುಗಳಣ್ನು ಆರಂಭಿಸಿದ್ದೇವೆ. ಚಿತ್ರದುರ್ಗದಲ್ಲೂ ಒಂದು ಕಾಲೇಜು ಆರಂಭಿಸಿದ್ದೇವೆ. ಇದರಿಂದ ಬಡವರ ಮಕ್ಕಳು ಮೆಡಿಕಲ್ ಓದಲು ಅವಕಾಶ ಸಿಕ್ಕಿದೆ. ಬಿಜೆಪಿ ಬಡವರ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ಮಾಡಿದ್ದೇವೆ. ರೈತರ ಮಕ್ಕಳ ಅನುಕೂಲಕ್ಕೆ ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಆದಿವಾಸಿ ಬುಡಕಟ್ಟು ಜನಾಂಗದ ಮಕ್ಕಳಿಗೆ ಏಕಲವ್ಯ ಯೋಜನೆ ಮೂಲಕ ಅನುಕೂಲ ಮಾಡಿಕೊಟ್ಟಿದ್ದೇವೆ. ಅದರೆ, ಕಾಂಗ್ರೆಸ್ ಇಂತ ಬಡವರ ಹಾಸಿಗೆ ದಿಂಬಿನಲ್ಲಿಯೂ ಹಗರಣ ಮಾಡಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಕಾಂಗ್ರೆಸ್ ಇತಿಹಾಸ ಮತ್ತು ಚಿಂತನೆ ಯಾವತ್ತೂ ಮರೆಯಬಾರದು. ಆತಂಕವಾದಿಗಳನ್ನು ತುಷ್ಟೀಕರಣ ಮಾಡುವ ಇತಿಹಾಸ ಕಾಂಗ್ರೆಸ್ನವರದು. ಆತಂಕವಾದಿ ಸತ್ತಾಗ ಕಾಂಗ್ರೆಸ್ ಕಣ್ಣೀರು ಹಾಕಿದೆ. ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಸಾಕ್ಷಿ ಕೇಳಿ ಸೈನಿಕರಿಗೆ ಅಪಮಾನ ಮಾಡಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆ ನಡೆದಾಗ ಸಹ ತುಷ್ಟೀಕರಣ ಮಾಡಿದ್ದಾರೆ. ಆದರೆ, ಆತಂಕವಾದಿಗಳನ್ನು ಮಟ್ಟಹಾಕುವುದೆ ನಮ್ಮ ಗುರಿ. ಕಾಂಗ್ರೆಸ್ ಹಾಗೂ ಜೆಡಿಎಸ್ನವರು ತುಷ್ಟೀಕರಣ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಮುಗಿದಿದೆ. ಅವರು ರಾಜ್ಯದಲ್ಲಿ ಕೊಡುವ ಗ್ಯಾರಂಟಿಗೆ ವಾರಂಟಿ ಇಲ್ಲ. ಗುಜರಾತ್ ಚುನಾವಣೆ ವೇಳೆ ಇಂತಹ ಗ್ಯಾರಂಟಿ ಕೊಟ್ಟಿದ್ದರು. ಮಾದರಿ ಮನೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು. ಅದರಲ್ಲಿ 500 ರೂ. ಪಡೆದು ಭ್ರಷ್ಟಾಚಾರ ಮಾಡಿದರು. ಎಲ್ಲ ಕಡೆ ಕಾಂಗ್ರೆಸ್ ಗ್ಯಾರಂಟಿ ಮುಗಿದಿದೆ. ರಾಜ್ಯದಲ್ಲಿ ಗೆಲ್ಲುವುದು ಕಷ್ಟವೆಂದು ಗ್ಯಾರಂಟಿ ಕಾರ್ಡ್ ಕೊಡ್ತಾ ಇದ್ದಾರೆ. ಅವರ ಗ್ಯಾರಂಟಿ ಜಾರಿಗೆ ಈಗಾಗಲೇ ಇರುವ ಉತ್ತಮ ಯೋಜನೆ ನಿಂತು ಹೋಗುತ್ತವೆ. ಬಿಜೆಪಿ, ಅಭಿವೃದ್ಧಿ ಕರ್ನಾಟಕ ಬಯಸುತ್ತದೆ. ಕಾಂಗ್ರೆಸ್ ಮಾತ್ರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.