

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಐದು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್, ಪ್ರಣಾಳಿಕೆಯಲ್ಲಿ ಭರಪೂರ ಭರವಸೆಯನ್ನು ಜನರ ಮುಂದಿಟ್ಟಿದೆ.
ಪ್ರಣಾಳಿಕೆಗೆ ಸರ್ವಜನಾಂದ ಶಾಂತಿಯ ತೋಟ ಎಂದು ಕಾಂಗ್ರೆಸ್ ಹೆಸರನ್ನು ಇಟ್ಟಿದೆ. ಅಲ್ಲದೆ, ಇದುವೇ ಕಾಂಗ್ರೆಸ್ನ ಬದ್ಧತೆ ಎಂದು ಹೇಳಿದೆ.
ನಂದಿನಿ ನಮ್ಮದೆ ಅಂತ ಕಾಂಗ್ರೆಸ್ ಹೇಳ ಹೊರಟಿದೆ. ಹೈನುಗಾರಿಕೆಗೆ ಆದ್ಯತೆ ನೀಡಿದ್ದು, 1.5 ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಿದೆ. ಹಸು ಮತ್ತು ಎಮ್ಮೆ ಕೊಳ್ಳಲು 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಹಾಗೂ ಪ್ರತಿ ಲೀಟರ್ ಹಾಲಿಗೆ 5 ರಿಂದ 7 ರೂ.ವರೆಗೆ ಪ್ರೊತ್ಸಾಹ ಧನ ಹೆಚ್ಚಳ ಭರವಸೆ ನೀಡಿದೆ.
ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಅನುಮೋದಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡಲಾಗುವುದು. 2006ರಿಂದ ನೇಮಕವಾದ ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ಸಹಾನುಭೂತಿಯ ನಿರ್ಧಾರ ಮಾಡಲಾಗುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಕಳೆದ 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶಗಳ ಕಾಂಗ್ರೆಸ್ ಸರ್ಕಾರಗಳ ಆದೇಶಗಳ ಮಾದರಿಯಲ್ಲಿ ಕಾಯಂಗೊಳಿಸುವ ಪ್ರಕ್ರಿಯೆ ಜಾರಿ ಮಾಡಲಾಗುವುದು.
ಅಂಗನವಾಡಿ ಕಾರ್ಯಕರ್ತೆಯರ ವೇತನ ರೂ 1,500/- ರಿಂದ ರೂ. 15,000/- ಹೆಚ್ಚಳ, ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ ರೂ 7,500/- ರಿಂದ ರೂ. 10,000/- ಹೆಚ್ಚಳ ಮತ್ತು ವಿಶ್ರಾಂತಿ ವೇತನ ರೂ. 2 ಲಕ್ಷ ರೂಪಾಯಿ. ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಚಿತ ಗೌರವಧನ ರೂ 5,000/- ದಿಂದ ರೂ 8,000/- ಹೆಚ್ಚಳ ಮಾಡಲಾಗುವುದು. ಸರಕಾರಿ ಸ್ವಾಮ್ಯದಲ್ಲಿರುವ ಸಾರಿಗೆ ನಿಗಮಗಳ ಉದ್ಯೋಗಿಗಳ ವೇತನ ಇತ್ಯಾದಿ ಸೌಲಭ್ಯಗಳನ್ನು ಸರಕಾರಿ ಸಮಾನಾಂತರವಾದ ಹುದ್ದೆಗಳ ವೇತನಗಳಿಗೆ ಅನುಗುಣವಾಗಿ, ಆಯಾ ನಿಗಮಗಳ ಆಯವ್ಯಯಗಳ ಪತ್ರಗಳಲ್ಲಿ ಅಡಕವಾಗುವಂತೆ ಕಾರ್ಯರೂಪಿಸಲಾಗುವುದು ಮತ್ತು ಬಿಸಿಯೂಟದ ಅಡಿಗೆಯವರಿಗೆ ಮಾಸಿಕ ಗೌರವಧನ ರೂ 3,600ರಿಂದ ರೂ 6,000ಕ್ಕೆ ಹೆಚ್ಚಳ ಮಾಡಲಾಗುವುದು.
ಒಟ್ಟು ಪೊಲೀಸ್ ಬಲದಲ್ಲಿ ಶೇ 33ರಷ್ಟು ಮಹಿಳಾ ಪೊಲೀಸ್ ಬಲ ಇರುವಂತೆ ನೇಮಕಾತಿ ಮಾಡಲಾಗುವುದು ಮತ್ತು ಕನಿಷ್ಠ ಶೇ 1ರಷ್ಟು ತೃತೀಯ ಲಿಂಗಿಗಳಗೆ ಅವಕಾಶ ಮಾಡಿಕೊಡಲಾಗುವುದು. ರಾತ್ರಿ ಪಾಳಿಯ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಮಾಸಿಕ ಭತ್ಯೆ ಮತ್ತು ಎಲ್ಲ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ ಮಾಡಲಾಗುವುದು. ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲ ಖಾಲಿ ಹುದ್ದೆಗಳ ಭರ್ತಿ ಮಾಡಲಾಗುವುದು. ನಾಲ್ಕು ವರ್ಷದೊಳಗೆ ಎಲ್ಲ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ ನೀಡಲಾಗುವುದು. ಹೊಸದಾಗಿ ಪೊಲೀಸ್ ಠಾಣೆಗಳ ನಿರ್ಮಾಣ, ಹಾಲಿ ಠಾಣಿಗಳ ನವೀಕರಣ, ಉತ್ತಮ ಸೌಲಭ್ಯ ಮತ್ತು ತಂತ್ರಜ್ಞಾನ ಪರಿಕರಗಳ ನಿಯೋಜನೆ ಮಾಡಲಾಗುವುದು. ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗದ ಮಾರ್ಗಸೂಚಿಯಂತೆ ಹಾಲಿ ಪೊಲೀಸ್ ಠಾಣಿಗಳನ್ನು ಮಕ್ಕಳ ಸ್ನೇಹಿ ಠಾಣೆಗಳಾಗಿ ಪರಿವರ್ತನೆ ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಸೈಬರ್ ಪೊಲೀಸ್ ಠಾಣಿಗಳ ನಿರ್ಮಾಣ ಮಾಡಲಾಗುವುದು.
ನ್ಯಾಯಪೀಠದೆದುರು ಎಲ್ಲರೂ ಸಮಾನರೇ. ಕನಕಪುರದಲ್ಲಿ ಅತ್ಯಾಧುನಿಕ ವಿಶ್ವದರ್ಜೆಯ ವಿಧಿವಿಜ್ಜಾನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಕರ್ನಾಟಕ ಮಾಹಿತಿದಾರರ ಸಂರಕ್ಷಣಾ ಕಾಯ್ದೆ ಜಾರಿ ಮಾಡಲಾಗುವುದು. ಯಾವುದೇ ರೀತಿಯಲ್ಲಿ ಮತದಾರರ ಮಾಹಿತಿ ಕಳವಿಗೆ ತಡೆ ಒಡ್ಡುವ ಕಾನೂನು ರಚನೆ ಮಾಡಲಾಗುವುದು. ಮಹಿಳಾ ದೌರ್ಜನ್ಯಗಳನ್ನು ತಡೆಯಲು ಕಾನೂನಿನಲ್ಲಿ ಕಠಿಣ ಕ್ರಮದ ತಿದ್ದುಪಡಿ ಮಾಡಲಾಗುವುದು. ರಾಜ್ಯದಲ್ಲಿರುವ ಎಲ್ಲ ನ್ಯಾಯಾಲಯಗಳ ಆಧುನೀಕರಣಕ್ಕಾಗಿ 3 ಸಾವಿರ ಕೋಟಿ ರೂ. ಪ್ರತ್ಯೇಕ ನಿಧಿ ನೀಡಲಾಗುವುದು. ಬಿಜೆಪಿ ಚಾಲ್ತಿಗೆ ತಂದ ಎಲ್ಲ ಜನವಿರೋಧಿ ಕಾನೂನುಗಳು ಒಂದು ವರ್ಷದೊಳಗೆ ರದ್ದು ಮಾಡಲಾಗುವುದು. ಭಯೋತ್ಪಾದನೆ, ಅತ್ಯಾಚಾರ ಹಾಗೂ ಮಹಿಳೆಯರ ಮೇಲೆ ಆಸಿಡ್ ದಾಳಿಯಂತಹ ಹೇಯ ಕೃತ್ಯಗಳ ವಿಚಾರಣೆಗೆ ವಿಶೇಷ ತ್ವರಿತಗತಿಯ ನ್ಯಾಯಾಲಯಗಳ ಸ್ಥಾಪನೆ ಮಾಡಲಾಗುವುದು. 100 ದಿನದೊಳಗೆ ಎಲ್ಲ ಆನ್‌ಲೈನ್ ಸಾಲ ನೀಡುವ ಅಪ್‌ಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ನೀತಿ ಜಾರಿ ಮಾಡಲಾಗುವುದು.
ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಚಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿ.ಎಫ್.ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ನಮ್ಮ ಹಳ್ಳಿ-ನಮ್ಮ ಸೌಲಭ್ಯ ಅಡಿಯಲ್ಲಿ ಹಳ್ಳಿಗಳಲ್ಲಿ ಸಾರ್ವಜನಿಕ ಸೌಲಭ್ಯ ಸುಧಾರಣೆಗೆ ಕ್ರಮ ವಹಿಸಲಾಗುವುದು. ಎಲ್ಲ ಮನೆಗಳಿಗೂ ಶುದ್ಧ ಕುಡಿಯುವ ನೀರು, ಶೌಚಾಲಯ, ಮೂಲ ಶಿಕ್ಷಣ, ಆರೋಗ್ಯ, ಸರ್ವ ಋತು ರಸ್ತೆಗಳಗಾಗಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಯೋಜನೆಗೆ ಐದು ವರ್ಷಗಳಲ್ಲಿ ರೂ 50 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಹೈಸ್ಪೀಡ್ ವೈಫೈ ಹಾಟ್‌ಸ್ಟಾಟ್ ಸ್ಥಾಪನೆ ಮಾಡಲಾಗುವುದು. ಗ್ರಾಮೀಣ ಜಿಲ್ಲೆ ರಸ್ತೆಗಳ ಡಾಂಬರೀಕರಣ ಮತ್ತು ಮಣ್ಣಿನ ರಸ್ತೆಗಳನ್ನು ಆದ್ಯತೆ ಮೆರೆಗೆ ಪಕ್ಕಾ ವಾಹನ ಸಂಚಾರ ರಸ್ತೆಗಳಾಗಿ ನಿರ್ಮಾಣ ಮಾಡಲಾಗುವುದು. ಬಯಲು ಸೀಮೆಯ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಕ್ಕೆ 10 ಮನೆಗಳಿಗೆ ಒಂದರಂತೆ ಮರುಪೂರಣ ಬಾವಿಗಳ ನಿರ್ಮಾಣ ಮಾಡಲಾಗುವುದು. ಪ್ರತಿ ಪಂಚಾಯತ್‌ನಲ್ಲೂ ತ್ಯಾಜ್ಯ ಮರುಸಂಸ್ಕರಣಾ ಘಟಕ ಸ್ಥಾಪನೆ ಮತ್ತು ಬಲವರ್ಧನೆ. ತ್ಯಾಜ್ಯಗಳ ಸಮರ್ಥ ವಿಲೇವಾರಿಗಾಗಿ ಪ್ರತಿ ತಾಲೂಕಿನಲ್ಲಿ 2 ಬಯೊಮೆಥನೇಷನ್ ಘಟಕಗಳ ಸ್ಥಾಪನೆ ಮಾಡಲಾಗುವುದು. ಎಲ್ಲ ತಾಲೂಕುಗಳಿಗೆ ರಾಜ್ಯ ಹೆದ್ದಾರಿಗಳ ಮೂಲಕ ಸಂಪರ್ಕ ಜಾಲ ಹಾಗೂ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಬಜೆಟ್‌ನಲ್ಲಿ ಅನುದಾನ ಹೆಚ್ಚಳ ಮಾಡಲಾಗುವುದು.
ಕನ್ನಡಿಗರ ಹೆಮ್ಮೆಯ ನಂದಿನಿಯ ಅಸ್ತಿತ್ವವನ್ನು ನಿರ್ಮೂಲ ಮಾಡಲು ಯಾರಿಗೂ ಬಿಡುವುದಿಲ್ಲ. ಮಿಷನ್ ಕ್ಷೀರ ಕ್ರಾಂತಿ ಪ್ರತಿ ದಿನ 1.5 ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿ ಸಾಧನೆಗಾಗಿ ಯೋಜನೆ ರೂಪಿಸಲಾಗುವುದು. ಪಶು ಭಾಗ್ಯ- ಉತ್ತಮ ತಳಿಯ ಹಸು ಎಮ್ಮೆಗಳ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ರೂ 3 ಲಕ್ಷದವರೆಗೆ ಸಾಲ ನೀಡಲಾಗುವುದು. ಕುರಿಗಾಹಿ ಸಂವರ್ಧನಾ ನಿಧಿ ಅಡಿಯಲ್ಲಿ ಕುರಿ ಸಾಕಾಣಿಕೆಗಾಗಿ 1 ಸಾವಿರ ಕೋಟಿ ರೂ. ನಿಧಿ ಸ್ಥಾಪನೆ ಮಾಡಲಾಗುವುದು. ಕ್ಷೀರಧಾರೆ ಯೋಜನೆ ಅಡಿಯಲ್ಲಿ ಪ್ರತಿ ಲೀಟರ್ ಹಾಲಿನ ಸಬ್ಸಿಡಿಯನ್ನು ರೂ 5 ರಿಂದ ರೂ 7ಕ್ಕೆ ಹೆಚ್ಚಳ ಮಾಡಲಾಗುವುದು. ಎಲ್ಲ ಕಂದಾಯ ವಿಭಾಗಗಳಲ್ಲಿ ನಂದಿನಿ ಡೈಲಿ ತಂತ್ರಜ್ಞಾನ ಪಾಟೆಕ್ನಿಕ್‌ಗಳ ಸ್ಥಾಪನೆ ಮಾಡಲಾಗುವುದು. ಋಣಮುಕ್ತ ಕುರಿಗಾಹಿ ಯೋಜನೆಯಡಿ ಎಲ್ಲ ಕುರಿ, ಮೇಕೆ ಸಾಕಾಣಿಕೆದಾರರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುವುದು.
ಪ್ರಣಾಳಿಕೆ ಬಿಡಗಡೆಗೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಣಾಳಿಕೆಗೆ ಪೂಜೆ ಸಲ್ಲಿಸಿದರು. ಅರಿಶಿನ ಕುಂಕುಮ, ವಿಳ್ಯೆದೆಲೆ ಇಟ್ಟು ಪೂಜೆ ಮಾಡಿದರು.
ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪರಮೇಶ್ವರ್, ರಾಜ್ಯದ ಜನರಿಗೆ ಭರವಸೆ ಕೊಡುವ ನಿಟ್ಟಿನಲ್ಲಿ ಸಮಿತಿ ಮಾಡಲಾಗಿತ್ತು. ನನ್ನನ್ನು ಅಧ್ಯಕ್ಷನ್ನಾಗಿ ಮಾಡಲಾಗಿತ್ತು. ಕಾಂಗ್ರೆಸ್ ಬದ್ಧತೆ ಮೇಲೆ ಪ್ರಣಾಳಿಕೆ ರಚನೆ ಆಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಸಮಸ್ಯೆ ಕೇಳಿದ್ದೇವೆ. ಜನರ ಸಮಸ್ಯೆ ಆಧಾರದ ಮೇಲೆ ಪ್ರಣಾಳಿಕೆ ರಚನೆ ಮಾಡಿದ್ದೇವೆ. ಕೆಳಸ್ತರ ಸಂಘ ಸಂಸ್ಥೆಗಳು, ವೈದ್ಯರು, ವಕೀಲರು, ಉದ್ಯಮಿಗಳು, ಕಾರ್ಮಿಕರು, ರೈತರು, ಪೌರ ಕಾರ್ಮಿಕರು, ಶಿಕ್ಷಣ ತಜ್ಞರು ಹಾಗೂ ಎಫ್ಕೆಸಿಸಿಐ, ಸೇರಿದಂತೆ ಅನೇಕ ಜನರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಬೆಂಗಳೂರು ಸಮಸ್ಯೆಗಳನ್ನು ಗುರುತಿಸಿದ್ದೇವೆ. ರಾಜಸ್ಥಾನ ಮತ್ತು ಛತ್ತೀಸ್ಗಢ ಸರ್ಕಾರದ ಭರವಸೆ ಕೂಡ ನೋಡಿದ್ದೇವೆ. ಎಲ್ಲವನ್ನು ಹಿರಿಯರ ಜತೆ ಚರ್ಚೆ ಮಾಡಿ ಪ್ರಣಾಳಿಕೆ ತಯಾರಿ ಮಾಡಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಪ್ರಣಾಳಿಕೆ ಬಿಡಗಡೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಭಾಗಿಯಾದರು.