

ಬೆಂಗಳೂರು: ಇನ್ನು ಕೆಲವೇ ಕ್ಷಣಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಬೃಹತ್ ರೋಡ್ ಶೋ ಆರಂಭವಾಗಲಿದೆ. ಇದಕ್ಕಾಗಿ ಪೊಲೀಸರು ಎಲ್ಲ ರೀತಿಯ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಸಂಚಾರಿ ಪೊಲೀಸರು ಫೀಲ್ಡಿಗೆ ಇಳಿದಿದ್ದಾರೆ.
ಎಲ್ಲೆಡೆ ಪೊಲೀಸರು ಗಸ್ತು ತಿರುತ್ತಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೇ ರೋಡ್ ಶೋ ನಡೆಯುವ ಮಾರ್ಗಗಳಲ್ಲಿ ವಾಹನಗಳು ರಸ್ತೆ ಇಳಿಯುವಂತಿಲ್ಲ. ಪರ್ಯಾರ್ಯ ಮಾರ್ಗವನ್ನು ಬಳಸುವಂತೆ ಜನರಲ್ಲಿ ಪೊಲೀಸರು ಮನೆ ಮಾಡಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ರೋಡ್ ಶೋ ಶುರುವಾಗಲಿದೆ. ರೋಡ್ ಶೋ ನಡೆಯುವ ಯಾವ ರಸ್ತೆಯಲ್ಲೂ ವಾಹನಗಳು ನಿಲ್ಲಿಸುವಂತಿಲ್ಲ. ರೋಡ್ ಶೋ ನಡೆಯುವ ಒಂದು ಗಂಟೆ ಮುಂಚೆಯೇ ರಸ್ತೆಗಳನ್ನು ಬ್ಲಾಕ್ ಮಾಡಲಾಗುತ್ತದೆ.
ರೋಡ್ ಶೋ ನಡೆಯುವ ಮಾರ್ಗ ಉದ್ದಕ್ಕೂ ಈಗಾಗಲೇ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಇದರ ಜೊತೆಗೆ ಮೋದಿ ಸರ್ಕಾರದ ಸಾಧನೆಗಳ ಫಲಕಗಳು ಎಲ್ಲರ ಗಮನ ಸೆಳೆಯುತ್ತಿವೆ. ಇಂದು ಸಾಕಷ್ಟು ಜನರು ಸೇರುವ ನಿರೀಕ್ಷೆಯಿದೆ. ಮೋದಿ ಭದ್ರತಾ ದೃಷ್ಟಿಯಿಂದ ಸ್ಥಳೀಯ ವಾಸಿಗಳಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಮೋದಿ ರೋಡ್ ಶೋ ವೇಳೆ ಯಾರೂ ಕೂಡ ಮನೆಯ ಟೆರೆಸ್ ಅಥವಾ ಬಾಲ್ಕನಿಯಲ್ಲಿ ನಿಲ್ಲುವಂತಿಲ್ಲ ಮತ್ತು ಅಪರಿಚಿತರನ್ನು ಕಂಡರೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಸಂಚರಿಸದೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ರಾಜಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್ಬಿಐ ಲೇಔಟ್, ಜೆ.ಪಿ. ನಗರ, ರೋಸ್ ಗಾರ್ಡನ್, ಜೆ.ಪಿ. ನಗರ, ಸಿರ್ಸಿ ಸರ್ಕಲ್, ಜೆ.ಜೆ. ನಗರ, ಬಿನ್ನಿಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ರಸ್ತೆ, ಆಮುಗಂ ಸರ್ಕಲ್, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣಾಶ್ರಮ, ಉಮಾ ಟಾಕೀಸ್, ಟಿ.ಆರ್. ಮಿಲ್, ಚಾಮರಾಜಪೇಟೆ ಮುಖ್ಯ ರಸ್ತೆ, ಬಾಳೇಕಾಯಿ ಮಂಡಿ, ಕೆ.ಪಿ. ಅಗ್ರಹಾರ, ಮಾಗಡಿ ಮುಖ್ಯರಸ್ತೆ, ಚೋಳೂರುಪಾಳ್ಯ, ಎಂ.ಸಿ. ವೃತ್ತ, ಪಶ್ಚಿಮ ಕಾರ್ಡ್ ರಸ್ತೆ, ಎಂ.ಸಿ. ಲೇಔಟ್, ನಾಗರಬಾವಿ ಮುಖ್ಯರಸ್ತೆ, ಬಿಜಿಎಸ್ ಮೈದಾನ, ಹಾವನೂರು ಸರ್ಕಲ್, ಬಸವೇಶ್ವರನಗರ 8ನೇ ಮುಖ್ಯರಸ್ತೆ ಮತ್ತು 15ನೇ ಮುಖ್ಯರಸ್ತೆ, ಶಂಕರಮಠ, ಮೋದಿ ಆಸ್ಪತ್ರೆ ರಸ್ತೆ, ನವರಂಗ್ ವೃತ್ತ, ಎಂಕೆಕೆ ರಸ್ತೆ, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆ ಮತ್ತು ಸ್ಯಾಂಕಿ ರಸ್ತೆ ಬಳಸದಂತೆ ಸಂಚಾರ ಪೊಲೀಸರು ತಿಳಿಸಿದ್ದಾರೆ.
* ರೋಡ್ ಶೋ ಮಾರ್ಗದ ಅಕ್ಕಪಕ್ಕದ ಕಟ್ಟಡ, ಮನೆಗಳ ಮಹಡಿ ಮೇಲೆ ನಿಲ್ಲಲು ಅವಕಾಶವಿಲ್ಲ.
* ಹೋಟೆಲ್, ಅಂಗಡಿ, ಮಳಿಗೆಗಳ ವಹಿವಾಟು ಬಂದ್.
* ಕಟ್ಟಡಗಳ ಬಳಿ, ಒಳಗೆ ಅಪರಿಚಿತರು ಒಳಪ್ರವೇಶಿಸದಂತೆ ನಿರ್ಬಂಧ.
* ನಿಗದಿತ ಸ್ಥಳದಲ್ಲಿ ನಿಂತು ರೋಡ್ ಶೋ ವೀಕ್ಷಿಸಬೇಕು.
* ಕಟ್ಟಡಗಳ ಒಳಗೆ ಮತ್ತು ಹೊರಗೆ ಅಡ್ಡಾಡಲು ಅವಕಾಶವಿಲ್ಲ