More

    ಮಧುಮೇಹಿಗಳು ಮಾವು ಸೇವಿಸಲು ಹಿಂದೇಟು ಬೇಡ

    ಮಧುಮೇಹಿಗಳು ಮಾವು ಸೇವಿಸಲು ಹಿಂದೇಟು ಬೇಡ| ಡಾ.ಜಿ.ಬಿ. ಸತ್ತೂರ
    ಮಾವಿನ ಹಣ್ಣು ಸಿಹಿಯಾಗಿರುವುದರಿಂದ ಸಹಜವಾಗಿ ಮಧುಮೇಹಿಗಳು ಇದನ್ನು ತಿನ್ನಲು ಹಿಂಜರಿಯುತ್ತಾರೆ. ನಾವು ಮಾವಿನ ಹಣ್ಣು ತಿನ್ನಬಹುದೆ? ಎಂಬುದು ಬಹಳಷ್ಟು ಮಧುಮೇಹಿಗಳ ಪ್ರಶ್ನೆಯಾಗಿದೆ. ಖಂಡಿತವಾಗಿಯೂ ತಿನ್ನಬಹುದು. ಮಿತವಾಗಿ ಸೇವಿಸುವುದರಿಂದ ಮಾವಿನ ಹಣ್ಣಿನಿಂದ ಮಧುಮೇಹಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ.

    ಮಾವಿನ ಹಣ್ಣಿನಲ್ಲಿ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಹೆಚ್ಚಿಸುವ ಸಾಮರ್ಥ್ಯವಿದ್ದರೂ ಇದು 25 ಗ್ರಾಮ್ ಕಾಬೋಹೈಡ್ರೆಟ್ ಹೊಂದಿದೆ. ನೇರವಾಗಿ ಪರಿಣಾಮ ಉಂಟು ಮಾಡಬಲ್ಲ ಗ್ಲುಕೋಸ್ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಇದು ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ತ್ವರಿತವಾಗಿ ಹೆಚ್ಚಿಸುವುದಿಲ್ಲ. ಮಾವಿನಹಣ್ಣಿನಲ್ಲಿ ಸುಕ್ರೋಸ್ ಶೇ. 50ರಷ್ಟು ಹಾಗೂ ಫ್ರುಟೋಸ್ ಶೇ. 30 ರಷ್ಟು ಪ್ರಮಾಣದಲ್ಲಿ ಇರುತ್ತದೆ. ಮಾವಿನಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ನಾರಿನಂಶ ಇರುವುದರಿಂದ ರಕ್ತಕ್ಕೆ ಗ್ಲುಕೋಸ್ ಪ್ರಮಾಣವನ್ನು ಹೀರಿಕೊಳ್ಳುವಿಕೆಯು ತಡವಾಗಿ ಆಗಲಿದೆ. ಇದರ ಸೇವನೆಯ ಬಳಿಕ ವ್ಯಕ್ತಿಗೆ ಹೊಟ್ಟೆ ತುಂಬಿದ ಅನುಭವ ಆಗಲಿದ್ದು, ಸಹಜವಾಗಿಯೇ ಮುಂದಿನ ಊಟವನ್ನು ವಿಳಂಬವಾಗಿ ಮಾಡುತ್ತಾನೆ. ಇದು ವ್ಯಕ್ತಿಯ ದೇಹದ ತೂಕವನ್ನು ನಿಯಂತ್ರಿಸಲು ನೆರವಾಗುತ್ತದೆ. ಆದರೆ, ಮಾವಿನ ಹಣ್ಣಿನ ಸೇವನೆ ಮಿತವಾಗಿರಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಒಂದು ಮಾವಿನ ಹಣ್ಣು 20 ಬಗೆಯ ಮಿಟಮಿನ್ಸ್ ಮತ್ತು ಮಿನರಲ್ಸ್ ಹೊಂದಿದೆ. ಒಂದು ದಿನಕ್ಕೆ ಮನುಷ್ಯನ ದೇಹಕ್ಕೆ ಅಗತ್ಯವಾದ ಮಿಟಮನ್ ಸಿ ಅನ್ನು ಶೇ. 70 ರಷ್ಟು ಪ್ರಮಾಣದಲ್ಲಿ ಒಂದು ಮಾವಿನ ಹಣ್ಣು ಪೂರೈಸುತ್ತದೆ. ವಿಟಮಿನ್ ಸಿ ಎಂಬುದು ಉರಿಯೂತ ನಿರೋಧಕ, ಉತ್ಕರ್ಷಣ ನಿರೋಧಕ (ಆಂಟಿ ಆಕ್ಸಿಡೆಂಟ್) ಹಾಗೂ ಸೋಂಕು ನಿರೋಧಕವೂ ಆಗಿದೆ. ಕೋವಿಡ್​ನಂಥ ವೈರಾಣು ಸೋಂಕು ಹರಡುವುದನ್ನು ಇದು ತಡೆಗಟ್ಟುತ್ತದೆ. ಆಂಟಿ ಆಕ್ಸಿಡೆಂಟ್​ಗಳು ಹೃದಯಾಘಾತವನ್ನು ನಿಯಂತ್ರಿಸುತ್ತವೆ. ನಿಯಮಿತವಾಗಿ ಮಾವಿನಹಣ್ಣು ಸೇವಿಸುವುದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. ಮೈಮೇಲೆ ಬಿಗಿಯಾದ ಚರ್ಮದಿಂದ ವ್ಯಕ್ತಿಯು ಕಡಿಮೆ ವಯಸ್ಸಿನವರಂತೆ ಕಾಣುತ್ತಾನೆ.

    ಮಾವಿನ ಹಣ್ಣಿನಲ್ಲಿ ಮೆಂಗಿಫೇರೇನ್ ಎಂಬ ಪದಾರ್ಥವಿದ್ದು ಇದು ಹೃದಯ, ರಕ್ತನಾಳದ ರಕ್ಷಣೆ ಮಾಡುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುತ್ತದೆ. ಇದರಲ್ಲಿ ಪೊಟ್ಯಾಸಿಯಂ ಪ್ರಮಾಣವು ಬಹಳ ಕಡಿಮೆಯಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ. ಕ್ಯಾನ್ಸರ್, ಮಲಬದ್ಧತೆಯನ್ನು ನಿಯಂತ್ರಿಸಲು ಮಾವಿನಹಣ್ಣಿನಲ್ಲಿರುವ ಫೈಬರ್ ಅಂಶವು ಕಾರಣವಾಗುತ್ತದೆ.

    ದಿನಕ್ಕೆ ಒಂದು ಹಣ್ಣು: ಒಂದು ದೊಡ್ಡ ಗಾತ್ರದ ಮಾವಿನ ಹಣ್ಣು ಮನುಷ್ಯನ ದೇಹಕ್ಕೆ ಶಕ್ತಿ ನೀಡಬಲ್ಲ 250 ಕ್ಯಾಲರಿಗಳನ್ನು ಹೊಂದಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡ ವ್ಯಕ್ತಿ ಮಾವಿನ ಹಣ್ಣಿನ ಋತು (ಸೀಸನ್) ಮುಗಿಯುವವರೆಗೆ ದಿನಕ್ಕೆ ಅರ್ಧ ಅಥವಾ ಒಂದು ಪೂರ್ಣ ಮಾವಿನ ಹಣ್ಣನ್ನು ನಿತ್ಯವೂ ಸೇವಿಸಬಹುದು. ಉಳಿದ ಆಹಾರ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಉಳಿದ ಆಹಾರಗಳಲ್ಲಿ ಮೊಳಕೆ ಕಾಳುಗಳನ್ನು ಸೇರಿಸಿಕೊಂಡರೆ ಉತ್ತಮ.

    ಮಾವಿನ ಹಣ್ಣಿನ ಸೇವನೆಗೆ ಯಾವ ಸಮಯ ಸೂಕ್ತ ಎಂಬುದು ಹಲವರ ಪ್ರಶ್ನೆಯಾಗಿದೆ. ಸಂಜೆ 5ರಿಂದ 6ಗಂಟೆಗೆ ಒಳಗೆ ಮಾವಿನ ಹಣ್ಣು ಸೇವಿಸಬೇಕು. ಮಧ್ಯಾಹ್ನದ ಭೋಜನದ ಬಳಿಕ 2 ಅಥವಾ 3 ಗಂಟೆಯ ಅವಧಿಯಲ್ಲೂ ಸೇವಿಸಬಹುದು. ಹುಳಿಯಾಗಿದೆ ಅಥವಾ ಹೆಚ್ಚು ಸಿಹಿಯಾಗಿಲ್ಲ ಎಂಬ ಕಾರಣಕ್ಕೆ ಮಾವಿನ ಹಣ್ಣಿಗೆ ಸಕ್ಕರೆ ಸೇರಿಸಿಕೊಂಡು ತಿನ್ನಬೇಡಿ. ಜ್ಯೂಸ್ ಮಾಡಿ ಕುಡಿಯುವುದು ಸೂಕ್ತವಲ್ಲ. ಹೋಳಿಗೆ ಅಥವಾ ಇನ್ನಿತರ ಸಿಹಿ ಪದಾರ್ಥಗಳ ಜತೆ ಮಾವು ಸೇವಿಸಬಾರದು.

    ಮಾವಿನ ಹಣ್ಣಿನ ತೊಟ್ಟಿನಿಂದ ಹೊರಬರುವ ಸೊನೆಯಿಂದ ಕೆಲವರಿಗೆ ಚರ್ಮದ ಅಲರ್ಜಿ ಉಂಟಾಗುವ ಸಾಧ್ಯತೆಗಳಿರುತ್ತದೆ. ಹೊಟ್ಟೆ ನೋವು, ಭೇದಿಯಾದರೆ ಅಂಥವರು ಮಾವಿನ ಹಣ್ಣಿನ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು. ಅನಿಯಂತ್ರಿತ ಮಧುಮೇಹಿಗಳು ವಾರದಲ್ಲಿ ಒಂದು ಮಾವಿನ ಹಣ್ಣಿನ 3-4 ತುಂಡುಗಳನ್ನು ಮಾತ್ರ ಸೇವಿಸಬಹುದು. ಮೊದಲೇ ಹೇಳಿದಂತೆ ನಿಯಂತ್ರಿತ ಮಧುಮೇಹಿಗಳು ದಿನಕ್ಕೆ ಅರ್ಧ ಅಥವಾ ಒಂದು ಪೂರ್ಣ ಮಾವಿನ ಹಣ್ಣು ತಿನ್ನಬಹುದು. ಆದರೆ, ಯಾವುದೇ ಕಾರಣಕ್ಕೂ ಈ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಾರದು. ಒಂದು ಕಪ್ ಕತ್ತರಿಸಿದ ಬಾಳೆಹಣ್ಣು ಅಥವಾ ದ್ರಾಕ್ಷಿಗಿಂತ ಮಾವಿನಹಣ್ಣು ಸೇವನೆ ಉತ್ತಮ. ಒಟ್ಟಾರೆ ಮಿತವಾಗಿ ಬಳಸುವ ಮೂಲಕ ಈ ಸೀಸನ್​ನಲ್ಲಿ ಮಾವಿನ ಹಣ್ಣಿನ ಸೇವನೆಯನ್ನು ಆನಂದಿಸಿ. ಮಧುಮೇಹಿಗಳು ಮಾವಿನಹಣ್ಣು ತಿನ್ನಲು ಹಿಂದೇಟು ಹಾಕುವುದು ಬೇಡ.

    (ಲೇಖಕರು ಫಿಜಿಸಿಯನ್, ಮಧುಮೇಹ ತಜ್ಞರು)

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್​ನ ನಂಬರ್; ಏನಿದರ ಹಿನ್ನೆಲೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts