More

    ಬೋರ್‌ವೆಲ್‌ಗೆ ವೈಜ್ಞಾನಿಕ ಕಾಯಕಲ್ಪ : ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಥಮ ಪ್ರಯತ್ನ

    ಧನಂಜಯ ಗುರುಪುರ

    ಪಡುಪೆರಾರ ಗ್ರಾಪಂ ವ್ಯಾಪ್ತಿಯ ವರಕಳ ಎಂಬಲ್ಲಿ 9 ವರ್ಷಗಳ ಹಿಂದೆ ಕೊರೆಯಲಾಗಿದ್ದ ಕೊಳವೆ ಬಾವಿಯ(ಬೋರ್‌ವೆಲ್) ನೀರಲ್ಲಿ ಕಬ್ಬಿಣದ ಅಂಶ ಮತ್ತು ಕೆಸರು ತುಂಬಿರುವುದು ನೀರು ಪರೀಕ್ಷಾ ವರದಿಯಿಂದ ದೃಢಪಟ್ಟಿದ್ದು, ಜಿಪಂ ನಿರ್ದೇಶನದ ಪ್ರಕಾರ ಪಂಚಾಯಿತಿ ಆಡಳಿತ ವೈಜ್ಞಾನಿಕ ತಂತ್ರಜ್ಞಾನ ಬಳಸಿ ಬೋರ್‌ವೆಲ್ ದುರಸ್ತಿಪಡಿಸಿದೆ. ಆ ಮೂಲಕ ಪರಿಸರವಾಸಿಗಳಿಗೆ ಕುಡಿಯಲು ಶುದ್ಧನೀರು ಸರಬರಾಜು ಮಾಡಿದ ಅಪೂರ್ವ ಪ್ರಯತ್ನ ಪಡುಪೆರಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಉಗ್ಗಪ್ಪ ಮೂಲ್ಯ ಅವರಿಂದ ನಡೆದಿದೆ.

    ದ.ಕ. ಜಿಲ್ಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಇಂಥ ಪ್ರಯತ್ನ ನಡೆದಿರುವುದು ಇದೇ ಪ್ರಥಮ. ಈ ಬಾರಿ ಅಧಿಕಗೊಂಡಿರುವ ತಾಪಮಾನದಿಂದ ಗ್ರಾಮೀಣ ಪ್ರದೇಶಗಳ ಬೋರ್‌ವೆಲ್‌ಗಳಲ್ಲಿ ನೀರು ತಳ ಹಿಡಿದಿದ್ದು, ಬಹುತೇಕ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನೂರಾರು ಬೋರ್‌ವೆಲ್ ಬರಿದಾಗಿದ್ದರೆ, ಕೆಲವು ಬೋರ್‌ವೆಲ್‌ಗಳ ನೀರಲ್ಲಿ ಕಬ್ಬಿಣದ ಅಂಶ ಅಥವಾ ಕೆಸರು ತುಂಬಿ ಕುಡಿಯಲು ಯೋಗ್ಯವಾಗಿಲ್ಲ ಎಂಬ ದೂರು ಕೇಳಿಬಂದಿವೆ.
    ಪಂಚಾಯಿತಿ ಆಡಳಿತಗಳು ಮಳೆಗಾಲಕ್ಕೆ ಮುಂಚೆ ಮತ್ತು ಮಳೆಗಾಲದ ಬಳಿಕ ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಬೋರ್‌ವೆಲ್‌ಗಳ ನೀರಿನ ಪರೀಕ್ಷೆ ನಡೆಸಬೇಕು.

    ಪಡುಪೆರಾರ ಗ್ರಾಪಂ ವ್ಯಾಪ್ತಿಯ ನೀರಕೊಡಿ, ವರಕಳ ಮತ್ತು ಅಮ್ಮ ಅಂಗಡಿ ಎಂಬಲ್ಲಿನ ಮೂರು ಬೋರ್‌ವೆಲ್‌ಗಳ ನೀರು ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಲ್ಲ ಎಂದು ಜಿ.ಪಂ.ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪಂಚಾಯಿತಿಗೆ ನಿರ್ದೇಶನ ನೀಡಿತ್ತು. ಇವುಗಳ ನೀರು ಉಪಯೋಗಿಸದೆ ತಕ್ಷಣ ಕೊಳವೆ ಬಾವಿಯ ಕೇಸಿಂಗ್ ಪೈಪ್ ಬದಲಿಸಬೇಕು, ಇಲ್ಲವೇ ನೀರಿನಲ್ಲಿರುವ ಕಬ್ಬಿಣದ ಅಂಶ ತೆರವುಗೊಳಿಸಬೇಕು. ತಪ್ಪಿದಲ್ಲಿ ಭವಿಷ್ಯದಲ್ಲಿ ಉಂಟಾಗಬಹುದಾದ ಎಲ್ಲ ಅನಾಹುತಗಳಿಗೆ ಪಿಡಿಒ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಿತ್ತು.

    ದುರಸ್ತಿ ಕಾರ್ಯ

    ಪಂಚಾಯಿತಿ ವ್ಯಾಪ್ತಿಯ ಒಂದು ಬೋರ್‌ವೆಲ್‌ಗೆ 65 ಸಾವಿರ ರೂ. ವಿನಿಯೋಗಿಸಿ ದುರಸ್ತಿ ಮಾಡಿದ್ದೇವೆ. ಇನ್ನೆರಡು ಬೋರ್‌ವೆಲ್‌ಗಳ ನೀರು ಕಲುಷಿತಗೊಂಡಿದ್ದರೂ ಅವುಗಳಲ್ಲಿ ನೀರು ತೀರಾ ಕಡಿಮೆಯಾಗಿದೆ. ಹಾಗಾಗಿ ಅವುಗಳ ದುರಸ್ತಿಗೆ ಮುಂದಾಗಿಲ್ಲ. ಜೋಗಿಲಬೈಲು, ಕಾಟಿಕಂಬ್ಳ ಮತ್ತು ಇನ್ನೂ ಒಂದೆರಡು ಕಡೆಗಳಲ್ಲಿ ಬೋರ್‌ವೆಲ್ ನೀರಿನ ಸಮಸ್ಯೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅಲ್ಲೂ ಐರನ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ನೀರು ಶುದ್ಧೀಕರಿಸುವ ಗುರಿ ಹೊಂದಿದ್ದೇವೆ. ಪಂಚಾಯಿತಿ ಆಡಳಿತದ ಮೂಲಕ ಗ್ರಾಮವಾಸಿಗಳಿಗೆ ವರ್ಷ ಪೂರ್ತಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆಂಬ ಉದ್ದೇಶವಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ತಿಳಿಸಿದ್ದಾರೆ.

    ಗ್ರಾಮೀಣ ಪ್ರದೇಶವಾದ ವ್ಯಾಪಕ ನೀರಿನಾಸರೆ ಇಲ್ಲದ ಪಡುಪೆರಾರದ ವರಕಳದಲ್ಲಿ ಪಂಚಾಯಿತಿ ಪಿಡಿಒ, ಅಧ್ಯಕ್ಷೆ, ಸದಸ್ಯರು ಮತ್ತು ಆಡಳಿತ ವರ್ಗದವರ ಮುತುವರ್ಜಿಯಿಂದ ನಡೆದಿರುವ ಈ ಕೆಲಸಕ್ಕೆ ಸ್ಥಳೀಯರು ಮತ್ತು ಇಲಾಖಾ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    ಅಂತರ್ಜಲ ಕುಸಿತಕ್ಕೆ ಕೊಡುಗೆ!

    ಆಧುನಿಕ ಭರಾಟೆಯಲ್ಲಿ ವ್ಯಾಪಕಗೊಳ್ಳುತ್ತಿರುವ ಕಾಂಕ್ರೀಟ್ ಕಾಡು ಹಾಗೂ ಏರುತ್ತಿರುವ ತಾಪಮಾನದಿಂದ ಅಂತರ್ಜಲ ಕುಸಿಯುತ್ತಿದೆ. ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ ಸಾವಿರಾರು ಕೊಳವೆಬಾವಿ ತೋಡಲಾಗಿದೆ. ಅವುಗಳಲ್ಲಿ ಒಂದಷ್ಟು ಬಾವಿಗಳು ನೀರಿಲ್ಲದೆ ನಿರುಪಯೋಗಿಯಾಗಿದ್ದರೆ, ಇನ್ನು ಹಲವು ಕಲುಷಿತ ನೀರಿನಿಂದ ಅಯೋಗ್ಯವಾಗಿವೆ. ಇಂತಹ ನೂರಾರು ಬೋರ್‌ವೆಲ್‌ಗಳ ಕೊಳವೆ ತೆರವುಗೊಳಿಸದೆ ಹಾಗೆಯೇ ಬಿಟ್ಟಿರುವುದು ಅಂತರ್ಜಲ ಕುಸಿಯಲು ಕಾರಣವಾಗಿದೆ. ನೀರಿನ ವಿಷಯದಲ್ಲಿ ಪ್ರಸಕ್ತ ಎದುರಾಗಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಯವರೂ ರೇನ್ ವಾಟರ್ ಹಾರ್ವೆಸ್ಟಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಡುಪೆರಾರ ಪಿಡಿಒ ಅವರಿಂದ ಜಿಲ್ಲೆಯಲ್ಲೇ ಮಾದರಿ ಕೆಲಸವೊಂದು ನಡೆದಿದೆ ಎಂದು ದ.ಕ. ಜಿ.ಪಂ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಶಿವಣ್ಣ ಮತ್ತು ರಾಸಾಯನಿಕ ತಜ್ಞೆ ವಿಜಯಲಕ್ಷ್ಮೀ ತಿಳಿಸಿದ್ದಾರೆ.

    ಉಡುಪಿಯಲ್ಲಿಯೂ ಸಕ್ಸಸ್!

    ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ಇದು ಪ್ರಥಮವಾಗಿದ್ದರೂ, ಸೋಮೇಶ್ವರ ಪಪಂ, ಪುತ್ತೂರು ಮತ್ತು ಸುಳ್ಯ ನಗರಸಭೆ ವ್ಯಾಪ್ತಿಯಲ್ಲಿ ತಲಾ ಒಂದೊಂದು, ಮಣಿಪಾಲದ ಮಾಹೆ ವ್ಯಾಪ್ತಿಯ ಎಂಐಟಿ, ಕೆಎಂಸಿಯಲ್ಲಿ ಒಟ್ಟು 8 ನಿರುಪಯೋಗಿ ಬೋರ್‌ವೆಲ್‌ಗೆ ಕಾಯಕಲ್ಪ ನೀಡಿದ್ದೇವೆ. ಜತೆಗೆ ಮಣಿಪಾಲದ ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಸಂಕೀರ್ಣವೊಂದರ ಬೋರ್‌ವೆಲ್ ದುರಸ್ತಿ ಮಾಡಿದ್ದೇವೆ. ಬೋರ್‌ವೆಲ್ ನೀರು ಹಾಳು ಮಾಡುವ ಕ್ರಿಮಿ, ಕೀಟ ಮತ್ತು ಹಾವಸೆ ಮೂಲ ಸುಟ್ಟು ಹಾಕಲು ನಮ್ಮ ಸಂಸ್ಥೆ ‘ಕ್ಲೋರಿನೇಶನ್ ಟೆಕ್ನಾಲಜಿ’ ಬಳಸುತ್ತದೆ. ಕ್ಲೋರಿನೇಶನ್ ಎಂದರೆ ಕ್ಲೋರಿನ್ ಬಳಸುವುದಲ್ಲ. ನೀರಿಗೆ ಹಾನಿಕಾರಕವಲ್ಲದ ‘ಫುಡ್ ಗ್ರೇಡ್ ಕೆಮಿಕಲ್’ ಹಾಕಿ, ನೀರು ಶುದ್ಧೀಕರಿಸುವ ವಿಧಾನ. ಕಬ್ಬಿಣದ ಅಂಶ ಎಂದರೆ ಕಬ್ಬಿಣವಲ್ಲ. ಅದು, ನೀರಲ್ಲಿ ಹುಟ್ಟಿಕೊಳ್ಳುವ ‘ಐರನ್ ಬ್ಯಾಕ್ಟೀರಿಯಾ’. ನೀರು ಹಾಳಾದ ಬೋರ್‌ವೆಲ್‌ಗಳ ಮೇಲೆ ಈ ಪ್ರಯೋಗ ಮಾಡಿದರೆ ಎಲ್ಲೆಂದರಲ್ಲಿ ಬೋರ್‌ವೆಲ್ ಕೊರೆಯುವ ಮಾಫಿಯಾ ತಡೆ ಹಾಗೂ ಅಂತರ್ಜಲ ಕುಸಿತಕ್ಕೆ ತಡೆ ಹೇರಲು ಸಾಧ್ಯವಿದೆ ಎಂದು ಜೆ.ಕೆ. ಆ್ಯಂಡ್ ಅಸೋಸಿಯೇಟ್ಸ್ ಮಾಲೀಕ ಜಯಂತ್ ಕುಮಾರ್ ತಿಳಿಸಿದ್ದಾರೆ.

    ವರಕಳದ ನಾಲದೆ ಪ್ರದೇಶದಲ್ಲಿ ಬೋರ್‌ವೆಲ್ ಇದ್ದರೂ ಅದರ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಕುದಿಸಿ ಅಥವಾ ಅಕ್ವಾಗಾರ್ಡ್ ಬಳಸಿ ಶುದ್ಧೀಕರಿಸಿ ನೀರು ಉಪಯೋಗಿಸುತ್ತಿದ್ದೆವು. ಪಂಚಾಯಿತಿ ಮತ್ತು ವಾರ್ಡ್ ಸದಸ್ಯ ಅರುಣ್ ಕೋಟ್ಯಾನ್ ಅವರಲ್ಲಿ ದೂರು ನೀಡಿದ ಬಳಿಕ, ಇದೀಗ ಹಳೆಯ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಾಗಿದೆ. ಅಗತ್ಯ ಸಂದರ್ಭ ಪಂಚಾಯಿತಿಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಪಿಡಿಒ, ಗ್ರಾಪಂ ಅಧ್ಯಕ್ಷೆ, ಸದಸ್ಯರಿಗೆ ಅಭಿನಂದನೆಗಳು.
    – ಚಂದ್ರ ಪೂಜಾರಿ, ಸ್ಥಳೀಯ ನಿವಾಸಿ

    ಎಲ್ಲರಿಗೂ ಕುಡಿಯಲು ಶುದ್ಧ ನೀರು ಪೂರೈಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಜಿಪಂನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶನದಂತೆ ತಕ್ಷಣ ಕಾರ್ಯಪ್ರವೃತ್ತನಾಗಿ, ಮಂಗಳೂರಿನ ಗ್ರೌಂಡ್ ವಾಟರ್ ಮ್ಯಾನೇಜ್‌ಮೆಂಟ್ ಮತ್ತು ರೇನ್ ವಾಟರ್ ಹಾರ್ವೆಸ್ಟಿಂಗ್ ಸಂಸ್ಥೆಯಾದ ಜೆ.ಕೆ. ಆ್ಯಂಡ್ ಅಸೋಸಿಯೇಟ್ಸ್‌ನ ನೆರವು ಪಡೆದು, ವೈಜ್ಞಾನಿಕ ತಂತ್ರಜ್ಞಾನ ಮೂಲಕ ಬೋರ್‌ವೆಲ್ ನೀರಲ್ಲಿದ್ದ ಕಬ್ಬಿಣದ ಅಂಶ ತೆರವು ಹಾಗೂ ಕೆಸರುಮುಕ್ತಗೊಳಿಸಿ ಸ್ಥಳೀಯ 50 ಮನೆಗಳಿಗೆ ಕುಡಿಯಲು ಯೋಗ್ಯವಾದ ನೀರು ಪೂರೈಕೆ ಮಾಡಿದ್ದೇವೆ.
    – ಉಗ್ಗಪ್ಪ ಮೂಲ್ಯ
    ಪಡುಪೆರಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts