More

    ಸ್ವರಾಭರಣ ಕಾರ್ಯಕ್ರಮದಲ್ಲಿ ಕವಿತೆಗಳಿಗೆ ಗಾಯನದ ರಂಗು

    ದಾವಣಗೆರೆ: ನನ್ನೆದೆಯ ಭಿತ್ತಿಯ ಮೇಲೆ ನೀನು ಬಿಡಿಸಿದ ಚಿತ್ರ
    ಮರೆವುದಾದರೂ ಹೇಗೆ ಕೊನೆಯ ಉಸಿರಿರುವ ತನಕ…
    ಕವಿಗಳ ಭಾವನಾಲಹರಿಯಲ್ಲಿ ಅರಳಿದ ಹತ್ತಾರು ಸುಂದರ ಕವಿತೆಗಳು ಸಂಗೀತದ ಸುಧೆಯೊಂದಿಗೆ ಕೇಳುಗರ ಮನ ತಟ್ಟಿದವು.
    ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸ್ವರಾಭರಣ’ ಸ್ಥಳೀಯ ಕವಿಗಳ ಪದ್ಯಗಾಯನದ ಸಮಾರೋಪ ಕಾರ್ಯಕ್ರಮದಲ್ಲಿ ಹಲವು ಕವಿಗಳ ಕವಿತೆಗಳನ್ನು ಅನುಶ್ರೀ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸುಮಧುರವಾಗಿ ಹಾಡಿ ರಂಜಿಸಿದರು.
    ಕವಿಗಳಾದ ಬಿ.ಎನ್. ಮಲ್ಲೇಶ್, ಆನಂದ ಋಗ್ವೇದಿ, ಮಲ್ಲಿಕಾರ್ಜುನ ಕಲಮರಹಳ್ಳಿ, ಸಂತೆಬೆನ್ನೂರು ಫೈಜ್ನಟ್ರಾಜ್, ಸತ್ಯಭಾಮಾ ಮಂಜುನಾಥ್, ನಾಗರತ್ನಾ ಮಲ್ಲಿಕಾರ್ಜುನ್ ಹಾಗೂ ಸಾಲಿಗ್ರಾಮ ಗಣೇಶ್ ಶೆಣೈ ಅವರ ಕವಿತೆಗಳಿಗೆ ಅನುಶ್ರೀ ಸಂಗೀತ ಶಾಲೆಯ ಸಂಸ್ಥಾಪಕಿ ವೀಣಾ ಸದಾನಂದ ಹೆಗಡೆ ರಾಗ ಸಂಯೋಜಿಸಿದ್ದರು.
    ಕರ್ನಾಟಕ ಸುಗಮ ಸಂಗೀತ ಪರಿಷತ್ ಕಾರ್ಯಾಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ಸುಗಮ ಸಂಗೀತ ಕನ್ನಡ ಭಾಷೆಯ ಅಸ್ಮಿತೆ. ಜಗತ್ತಿನ ಯಾವ ಭಾಷೆಯಲ್ಲಿ ಇಲ್ಲದ ಏಕೈಕ ಮಾಧ್ಯಮ. ಇದೊಂದು ತಪಸ್ಸು ಎಂದು ಹೇಳಿದರು.
    ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದರೆ ಸಾಕು ಅಹಂಭಾವದಿಂದ ಹೊಸ ಪ್ರತಿಭೆಗಳನ್ನು ದೂರ ತಳ್ಳುವುದನ್ನು ಕಾಣುತ್ತೇವೆ. ಹೊಸ ಪರಿಕಲ್ಪನೆಯ ಸ್ಥಳೀಯ ಕವಿಗಳ ಪದ್ಯ ಗಾಯನ ಕಾರ್ಯಕ್ರಮ ಮರಳುಗಾಡಿನ ಓಯಸ್ಸಿಸ್ ನಂತೆ, ಕವಿಗಳು ಹಾಗೂ ಗಾಯಕರಿಗೆ ಉತ್ಸಾಹದೊಂದಿಗೆ ಚೈತನ್ಯ ತಂದುಕೊಡಲಿದೆ ಎಂದರು.
    ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಸಂಗೀತ ಎನ್ನುವುದು ಉತ್ಕೃಷ್ಟ ಕಲೆ. ಸಂಗೀತ ಪ್ರಕಾರಗಳಲ್ಲಿ ಸುಗಮ ಸಂಗೀತಕ್ಕೆ ಕೇಳುಗರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ. ಸಂಗೀತದ ಅಭಿರುಚಿ ಮೂಡಿಸುವ ಹೊಸ ಪ್ರಯತ್ನಕ್ಕೆ ಈ ಕಾರ್ಯಕ್ರಮ ನಾಂದಿ ಹಾಡಿದೆ ಎಂದು ತಿಳಿಸಿದರು.
    ಸುಗಮ ಸಂಗೀತ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ವಿ. ಪ್ರವೀಣ್ ಮಾತನಾಡಿ, ಸುಗಮ ಸಂಗೀತದಲ್ಲಿ ಬಹಳಷ್ಟು ಅದ್ಭುತ ಕವಿತೆಗಳು ರಾಗ ಸಂಯೋಜನೆ ಮೂಲಕ ಹೊರಹೊಮ್ಮಿವೆ. ಇತ್ತೀಚಿನ ದಿನಗಳಲ್ಲಿ ಹೊಸ ಕವಿತೆಗಳು ಬರುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ಹೊಸ ಕವಿತೆಗಳಿವೆ, ಸೂಕ್ತ ವೇದಿಕೆ ಸಿಗುತ್ತಿಲ್ಲ. ಹೊಸ ಕವಿಗಳು ಹಾಗೂ ಗಾಯಕರನ್ನು ಉತ್ತೇಜಿಸಲು ಇದೊಂದು ಅಪರೂಪದ ಪರಿಕಲ್ಪನೆ ಎಂದರು.
    ಸುಗಮ ಸಂಗೀತ ಪರಿಷತ್ ಖಜಾಂಚಿ ಪ್ರಶಾಂತ್ ಉಡುಪ, ಪರಿಷತ್‌ನ ಮೈಸೂರು ಜಿಲ್ಲಾಧ್ಯಕ್ಷ ನಾಗರಾಜ್ ವಿ. ಬೈರಿ, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಶಾಂತಾ ಎಸ್. ಶೆಟ್ಟಿ, ಮಂಡ್ಯ ಜಿಲ್ಲಾಧ್ಯಕ್ಷ ಡೇವಿಡ್ ಪ್ರತಿಭಾಂಜಲಿ, ವೀಣಾ ಸದಾನಂದ ಹೆಗಡೆ ಇದ್ದರು. ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ಸ್ವಾಗತಿಸಿದರು, ಪರಿಷತ್ ಜಿಲ್ಲಾಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ನಿರೂಪಿಸಿದರು.
    ಕರ್ನಾಟಕ ಸುಗಮ ಸಂಗೀತ ಪರಿಷತ್, ಅನುಶ್ರೀ ಸಂಗೀತ ಶಾಲೆ ಹಾಗೂ ಕಲಾಕುಂಚ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    —-

    See also  ಬಿಜೆಪಿಯಿಂದ ನಾಳೆ ಬೈಕ್ ರ‌್ಯಾಲಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts