More

    31 ಹಳ್ಳಿಗಳಲ್ಲಿ ತಕ್ಷಣ ಬೋರ್‌ವೆಲ್ ಕೊರೆಸಿ

    ಕಡೂರು: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಿ ಹಾಗೂ ಮುಂದಿನ ಒಂದು ವಾರದೊಳಗಾಗಿ ಕುಡಿಯುವ ನೀರಿನ ಸಮಸ್ಯೆಗಳು ಎದುರಾಗಬಹುದಾದ 31 ಗ್ರಾಮಗಳಲ್ಲಿ ತುರ್ತಾಗಿ ಬೋರ್‌ವೆಲ್ ಕೊರೆಸಲು ಅಗತ್ಯ ಕ್ರಮವಹಿಸಿ ಎಂದು ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಗುರುವಾರ ತಾಪಂ ಸಭಾಂಗಣದಲ್ಲಿ ಕುಡಿಯುವ ನೀರಿನ ನಿರ್ವಹಣೆ ಸಂಬಂಧ ಆಯೋಜಿಸಿದ್ದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು ಪೂರೈಕೆಗಾಗಿ ಹೊಸ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ವಿಳಂಬ ಮಾಡದೆ ತ್ವರಿತವಾಗಿ ಪೂರ್ಣಗೊಳಿಸಿ. ತುರ್ತಾಗಿ ನೀರು ಪೂರೈಕೆ ಮಾಡಬೇಕಿದೆ ಎಂದು ತಿಳಿಸಿದರು.
    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ರವಿಶಂಕರ್ ಮಾತನಾಡಿ, ಈಗಾಗಲೇ ಸಮಸ್ಯಾತ್ಮಕವಾದ 31 ಗ್ರಾಮಗಳನ್ನು ಗುರುತಿಸಿಕೊಳ್ಳಲಾಗಿದೆ. ಬಹುಮುಖ್ಯವಾಗಿ ಎರಡು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದನ್ನು ತಾತ್ಕಾಲಿಕವಾಗಿ ಬಗೆಹರಿಸಲಾಗಿದೆ. ಹೊಸದಾಗಿ 18 ಕೊಳವೆಬಾವಿ ಕೊರೆಸಲಾಗಿದ್ದು, ಇದರಲ್ಲಿ 4 ವಿಫಲವಾಗಿವೆ. ತಾಲೂಕಿನ ಜೋಡಿತಿಮ್ಮಾಪುರ ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಟ್ಯಾಂಕರ್ ಮೂಲಕ ಸರಬರಾಜಿಗೆ ಕ್ರಮವಹಿಸಲಾಗುತ್ತಿದೆ. ಜತೆಯಲ್ಲಿ ಮಚ್ಚೇರಿ ಗ್ರಾಮದಲ್ಲಿ ಬಾಡಿಗೆ ನೀಡಿ ಖಾಸಗಿ ಬೋರ್‌ವೆಲ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
    ತಾಪಂ ಇಒ ಸಿ.ಆರ್. ಪ್ರವೀಣ್ ಮಾತನಾಡಿ, ತಾಲೂಕಿನಲ್ಲಿ 23 ವಾರಗಳಿಗಾಗುವಷ್ಟು ಮೇವು ದಾಸ್ತಾನು ಇದೆ. ಹೈನುಗಾರಿಕೆ ಅವಲಂಬಿಸಿರುವ ಜಮೀನು ರಹಿತ ರೈತರು ತಮ್ಮ ಜಾನುವಾರುಗಳಿಗೆ ಮೇವು ಬೇಕಾಗಿದ್ದರೆ ಸ್ಥಳೀಯ ಗ್ರಾಪಂ ಹಾಗೂ ಪಶು ಆಸ್ಪತ್ರೆಗಳಲ್ಲಿ ಅರ್ಜಿ ನೀಡಿ ರಿಯಾಯಿತಿ ದರದಲ್ಲಿ ಮೇವನ್ನು ಪಡೆದುಕೊಳ್ಳಲು ಪಿಡಿಒಗಳು ಜಾಗೃತಿ ಮೂಡಿಸಬೇಕಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಪಣವಾಗಿರುವ ಸರಸ್ವತಿಪುರ, ಕಾರೇಹಳ್ಳಿ ಹಾಗೂ ದೊಡ್ಡಘಟ್ಟ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ವಹಿಸಬೇಕಿದೆ ಎಂದು ತಿಳಿಸಿದರು.
    ತಹಸೀಲ್ದಾರ್ ಎಂ.ಪಿ.ಕವಿರಾಜ್, ಪಶು ಸಹಾಯಕ ನಿರ್ದೇಶಕ ಡಾ. ಉಮೇಶ್, ಬಿಇಒ ಆರ್.ಸಿದ್ದರಾಜುನಾಯ್ಕ, ಪಿಡಿಒ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts