More

  ತೈಲ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ      ಟ್ರ್ಯಾಕ್ಟರ್ ಆಟೋಗೆ ಹಗ್ಗ ಕಟ್ಟಿ ಎಳೆದ ಕಾರ್ಯಕರ್ತರು

  ದಾವಣಗೆರೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
  ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಟ್ರ್ಯಾಕ್ಟರ್ ಮತ್ತು ಆಟೋಗಳಿಗೆ ಹಗ್ಗಕಟ್ಟಿ ಎಳೆದೊಯ್ದರೆ, ಮುಖಂಡರು ಎತ್ತಿನಬಂಡಿ ಏರಿ ಮೆರವಣಿಗೆ ಹೊರಟರು.
  ಬಿಜೆಪಿ ಬಾವುಟ ಹಾಗೂ ಭಿತ್ತಿಪತ್ರ ಹಿಡಿದು ಗಾಂಧಿ ವೃತ್ತದ ಮಾರ್ಗದಲ್ಲಿ ನಗರದ ಉಪ ವಿಭಾಗಾಧಿಕಾರಿ ಕಚೇರಿಗೆ ಹೊರಟ ಪ್ರತಿಭಟನಾಕಾರರು ಕಚೇರಿ ಮುಂಭಾಗದ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ಸರ್ಕಾರ ಆರ್ಥಿಕ ದುಸ್ಥಿತಿಯಲ್ಲಿದೆ ಎಂದು ಮಹಿಳೆಯರು ದೇಣಿಗೆ ಸಂಗ್ರಹಿಸಿದರು.
  ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿರುವುದರಿಂದ ಅಗತ್ಯ ವಸ್ತುಗಳ ಜತೆಗೆ ಸರಕು ಸಾಗಣೆ ಬೆಲೆ ಗಗನಕ್ಕೇರಲಿವೆ. ಕೂಡಲೇ ದರ ಏರಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
  ಬಿಜೆಪಿ ಆಡಳಿತದಲ್ಲಿ ರಾಜ್ಯ ಸರ್ಕಾರದ ಖಜಾನೆ ಭರ್ತಿಯಾಗಿತ್ತು. ಕಾಂಗ್ರೆಸ್ ಆಡಳಿತಕ್ಕೆ ಬಂದಮೇಲೆ ಖಾಲಿಯಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
  ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ರಾಜ್ಯದ ಬೊಕ್ಕಸ ಖಾಲಿ ಮಾಡುವ ಜತೆಗೆ ಜನಸಾಮಾನ್ಯರ ರಕ್ತ ಹೀರುವ ಕಾರ್ಯಕ್ರಮ ಹಾಕಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದವರು ಹಾಗೂ ದಲಿತ ಸಮುದಾಯಗಳ ಸಹಸ್ರಾರು ಕೋಟಿ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿ ಅನ್ಯಾಯವೆಸಗಿದ್ದಾರೆ ಎಂದು ದೂರಿದರು.
  ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿವೆ. ಕಾಂಗ್ರೆಸ್ ಶಾಸಕರು ಗ್ಯಾರಂಟಿ ಯೋಜನೆಗಳೇ ಬೇಡ ಎನ್ನುತ್ತಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಯಾವುದೇ ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಮರಳು ಮಾಫಿಯಾ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ನಿರ್ಲಕ್ಷೃ ವಹಿಸಿದ್ದಾರೆ ಎಂದು ಆರೋಪಿಸಿದರು.
  ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ರಾಜ್ಯವನ್ನು ಲೂಟಿ ಮಾಡಲಿಕ್ಕಾಗಿಯೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ಹಣವನ್ನು ಸರ್ಕಾರ ನುಂಗಿಹಾಕಿದೆ ಎಂದರು.
  ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಕಾಂಗ್ರೆಸ್ ಸರ್ಕಾರ ತೊಲಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
  ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಮುಖಂಡರಾದ ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ್, ಬಿ.ಜೆ. ಅಜಯ್‌ಕುಮಾರ್, ಯಶವಂತರಾವ್ ಜಾಧವ್, ಕೊಳೇನಹಳ್ಳಿ ಸತೀಶ್, ಬಿ.ಎಸ್. ಜಗದೀಶ್, ಧನಂಜಯ್ ಕಡ್ಲೇಬಾಳ್, ಎಸ್.ಟಿ. ವೀರೇಶ್, ಶ್ರೀನಿವಾಸ್ ದಾಸಕರಿಯಪ್ಪ, ಶಿವನಹಳ್ಳಿ ರಮೇಶ್, ಆಲೂರು ನಿಂಗರಾಜ್, ಶ್ಯಾಮ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

  See also  ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ಬೇಕು ತಾಳ್ಮೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts