

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಕಡಬ, ಬೆಳ್ತಂಗಡಿ ತಾಲೂಕುಗಳಲ್ಲಿ ಶನಿವಾರ ಸಂಜೆಯ ವೇಳೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮೇ 19ರಿಂದ 22ರ ತನಕ ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ನಗರ ಭಾಗದಲ್ಲಿ ತುಂತುರು ಮಳೆಯ ಜತೆಗೆ ಮೋಡ ಕವಿದ ವಾತಾವರಣ ಇಡೀ ದಿನ ಕಾಣಿಸಿಕೊಂಡಿದ್ದು, ರಾತ್ರಿ ಹೊತ್ತು ನಗರದ ವಿವಿಧ ಭಾಗದಲ್ಲಿ ಕೊಂಚ ಮಳೆಯಾಗಿದೆ. ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬೆಳ್ತಂಗಡಿಯ ಧರ್ಮಸ್ಥಳ, ಉಜಿರೆ ಭಾಗದಲ್ಲಿ ಸಂಜೆ ಹೊತ್ತು ಹೆಚ್ಚು ಮಳೆಯಾಗಿದೆ. ಉಳಿದಂತೆ ಪುತ್ತೂರು ಭಾಗದಲ್ಲಿ ಸಂಜೆ ಹೊತ್ತು ಕೆಲವು ಭಾಗದಲ್ಲಿ ಮಳೆಯಾಗಿದೆ.
ಹೆದ್ದಾರಿಯಲ್ಲಿ ಹರಿದ ಮಳೆ ನೀರು: ಕೊಕ್ಕಡ ಮತ್ತು ನೆಲ್ಯಾಡಿಯಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ, ಮಳೆ ನೀರು ರಸ್ತೆಯಲ್ಲಿ ಹರಿದು ಸವಾರರಿಗೆ ತೊಂದರೆ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಸ್ತೆ ಕಾಮಗಾರಿ ಕಾರ್ಯ ನಿಧಾನ ಗತಿಯಲ್ಲಿ ನಡೆಯುತ್ತಿದ್ದು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಮಂಗಳೂರು ಬೆಂಗಳೂರು ಸಂಪರ್ಕಿಸುವ ರಸ್ತೆ ಇದಾಗಿದ್ದು ನಿತ್ಯ ಹೊಸ ಸವಾರರೇ ಇದರಲ್ಲಿ ಚಲಿಸುವ ಕಾರಣ ರಸ್ತೆಯ ಆವ್ಯವಸ್ಥೆಯಿಂದ ಪ್ರಯಾಣಿಕರಿಗೆ ಸವಾಲಾಗಿದೆ.
ಧರ್ಮಸ್ಥಳ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಕೊಕ್ಕಡ ಸಮೀಪದ ಹೂವಿನ ಕೊಪ್ಪಲ ಎಂಬಲ್ಲಿ ನೀರು ತುಂಬಿ ಕೆರೆಯ ವಾತಾವರಣ ಸೃಷ್ಟಿಯಾಯಿತು. ಪ್ರತಿ ವರ್ಷವೂ ಜೋರಾದ ಮಳೆಗೆ ಈ ಪ್ರದೇಶ ನೀರಿನಿಂದ ಆವೃತವಾಗುತ್ತಿದ್ದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇದರ ಅರಿವಿದ್ದು ದಿವ್ಯ ಮೌನ ವಹಿಸಿದ್ದಾರೆ . ಚರಂಡಿಗಳ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಈ ರೀತಿಯ ಅವ್ಯವಸ್ಥೆ ಈ ಭಾಗದಲ್ಲಿ ಉಂಟಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಾಲಾ ಆರಂಭ ಇರುವುದರಿಂದ ಇದೇ ರಸ್ತೆಯಲ್ಲಿ ಸಾಗುವ ವಿದ್ಯಾರ್ಥಿಗಳಿಗೆ ಇದು ಕಂಟಕವಾಗಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೀನುಗಾರರಿಗೆ ಮುನ್ನೆಚ್ಚರಿಕೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆ ಇರುವುದರಿಂದ ಮೇ 20ರಿಂದ 22ರ ಅಸುಪಾಸಿನಲ್ಲಿ ಮೀನುಗಾರರು ಮೀನುಗಾರಿಕೆಗೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ ತೀರದಲ್ಲಿ ಗಾಳಿಯ ಒತ್ತಡ 45ಕಿ.ಮೀನಿಂದ 65 ಕಿ.ಮೀ ವೇಗದಲ್ಲಿ ಇರುವ ಸಾಧ್ಯತೆಯಿದ್ದು, ಈ ಸಮಯದಲ್ಲಿ ಕಡಲಿನಲ್ಲಿ ಮೀನುಗಾರಿಕೆಗೆ ಇಳಿಯಬಾರದು ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.