

ಮಂಗಳೂರು: ಗ್ರಾಮೀಣ ಭಾಗದಲ್ಲಿ ಪ್ರತಿ ದಿನ ಮಳೆಯಾಗುತ್ತಿರುವುದರಿಂದ ತುಂಬೆಯಿಂದ ಮಂಗಳೂರು ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣ ಗೋಚರಿಸಿದೆ.
ಕೆಲವು ದಿನಗಳ ಹಿಂದೆ ತುಂಬೆ ಡ್ಯಾಂ ಎಂಟು ವರ್ಷದ ಬಳಿಕ ನೀರು ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಸುಬ್ರಹ್ಮಣ್ಯ, ಕಡಬ, ಬೆಳ್ತಂಗಡಿ ಪರಿಸರದಲ್ಲಿ ನಿರಂತರವಾಗಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ನೀರು ಹರಿದು ಬರಲಾರಂಭಿಸಿದೆ. ಕುಸಿತ ಕಂಡಿದ್ದ ಎಎಂಆರ್ ಡ್ಯಾಂನ ನೀರು ಶನಿವಾರ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಇನ್ನೆರಡು ದಿನಗಳಲ್ಲಿ ಡ್ಯಾಂ ಭರ್ತಿಯಾಗಿ ನೀರು ಉಕ್ಕಿ ಹರಿದು ಬಂದು ತುಂಬೆ ಡ್ಯಾಂನಲ್ಲಿ ಸಂಗ್ರಹವಾಗಲಿದೆ. ತುಂಬೆ ಡ್ಯಾಂ ನೀರಿನ ಮಟ್ಟವೂ ಏರಿಕೆಯಾಗಲಿದೆ. ಗ್ರಾಮೀಣ ಭಾಗಗಳಲ್ಲಿ ಬತ್ತಿ ಹೋಗಿದ್ದ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.
ಡ್ಯಾಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದನ್ನು ಮನಗಂಡು ಏನು ಮಾಡುವುದೆಂದು ಆತಂಕದಲ್ಲಿದ್ದ ಆಡಳಿತಕ್ಕೆ ಮಳೆಯಾಗಲು ಆರಂಭಿಸಿರುವುದು ದೊಡ್ಡ ಹೊರೆ ಹಗುರವಾದಂತಾಗಿದೆ. ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇನ್ನು ಸಮಸ್ಯೆ ಇಲ್ಲ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.