More

    ಜಿಎಸ್​ಟಿ ಸಂಗ್ರಹ ಮಾಸಿಕ ದಾಖಲೆ; ಏಪ್ರಿಲ್​ನಲ್ಲೇ 1,87,035 ಕೋಟಿ ರೂ. ಕಲೆಕ್ಷನ್

    ನವದೆಹಲಿ: ಸರಕು ಮತ್ತು ಸೇವೆ ತೆರಿಗೆ (ಜಿಎಸ್​ಟಿ) ಸಂಗ್ರಹದಲ್ಲಿ ವ್ಯಾಪಕ ಹೆಚ್ಚಳವಾಗಿದ್ದು, ದಾಖಲೆಯ ಆದಾಯ ಹರಿದುಬಂದಿದೆ. ಕಳೆದ ತಿಂಗಳು ಏಪ್ರಿಲ್​ನಲ್ಲಿ ಸಂಗ್ರಹವಾದ ಒಟ್ಟು ಜಿಎಸ್​ಟಿ ಆದಾಯವು 1,87,035 ಕೋಟಿ ರೂಪಾಯಿ. ಇದುವರೆಗೆ ಮಾಸಿಕವಾಗಿ ಸಂಗ್ರಹಗೊಂಡ ಅತ್ಯಂತ ಗರಿಷ್ಠ ಮೊತ್ತ ಇದಾಗಿದ್ದು, ಜಿಎಸ್​ಟಿ ಸಂಗ್ರಹದಲ್ಲಿ ದಾಖಲೆಯನ್ನೇ ಬರೆದಿದೆ. ಕಳೆದ ವರ್ಷದ ಏಪ್ರಿಲ್​ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದ್ದು, ಇದಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್​ನಲ್ಲಿ ಶೇಕಡಾ 12ರಷ್ಟು ಏರಿಕೆಯಾಗಿದೆ. ಇನ್ನು 2022-23ರ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹವು -ಠಿ;18.10 ಲಕ್ಷ ಕೋಟಿಯಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ. 22ರಷ್ಟು ಹೆಚ್ಚಳ ಕಂಡಿದೆ. ಈಗ ಸಂಗ್ರಹವಾಗಿರುವ ಜಿಎಸ್​ಟಿಯಲ್ಲಿ ಸಿಜಿಎಸ್​ಟಿ 38,440 ಕೋಟಿ ರೂ., ಎಸ್​ಜಿಎಸ್​ಟಿ 47,412 ಕೋಟಿ ರೂ., ಐಜಿಎಸ್​ಟಿ 89,158 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 34,972 ಕೋಟಿ ರೂ. ಸೇರಿದಂತೆ) ಮತ್ತು ಸೆಸ್ 12,025 ಕೋಟಿ ರೂ. ಇದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

    ವ್ಯಾಪಾರ ಚೇತರಿಕೆ

    2022ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ, 2023ರ ಏಪ್ರಿಲ್ ತಿಂಗಳಿನಲ್ಲಿ ಸರಕುಗಳ ಆಮದು ಮೇಲಿನ ಜಿಎಸ್​ಟಿ ಆದಾಯವು ಶೇಕಡಾ 30ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಜಿಎಸ್​ಟಿ ಆದಾಯವು ಶೇಕಡಾ 17ರಷ್ಟು ಹೆಚ್ಚಾಗಿದೆ. 2022ರ ಮಾರ್ಚ್​ನಲ್ಲಿ ಒಟ್ಟು ಇ-ವೇ ಬಿಲ್​ಗಳ ಸಂಖ್ಯೆ 7.7 ಕೋಟಿಯಾಗಿದೆ. ಇದು 2022ರ ಫೆಬ್ರವರಿಯಲ್ಲಿನ ಇ-ವೇ ಬಿಲ್​ಗಳ ಸಂಖ್ಯೆಯಾದ 6.8 ಕೋಟಿಗೆ ಹೋಲಿಸಿದರೆ ಶೇಕಡಾ 13ರಷ್ಟು ಹೆಚ್ಚಾಗಿದೆ. ಇದು ವ್ಯಾಪಾರ ಚಟುವಟಿಕೆಯ ವೇಗದ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಜಿಎಸ್​ಟಿಆರ್-3 ಸಲ್ಲಿಸುವ ಮೂಲಕ ಈ ವರ್ಷದ ಏಪ್ರಿಲ್​ನಲ್ಲಿ 84.7 ಪ್ರತಿಶತದಷ್ಟು ನೋಂದಾಯಿತ ವ್ಯಾಪಾರ ಸಂಸ್ಥೆಗಳು ತೆರಿಗೆಯನ್ನು ಪಾವತಿಸಿವೆ. ಇದು ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಶೇಕಡಾ 78.3 ರಷ್ಟು ಇತ್ತು. ಅಲ್ಲದೆ, ಇದೇ ಅವಧಿಯಲ್ಲಿ ಶೇಕಡಾ 83.11ರಷ್ಟು ಜಿಎಸ್​ಟಿ ನೋಂದಾಯಿತ ವ್ಯವಹಾರಗಳು ಪೂರೈಕೆ ಅಥವಾ ಮಾರಾಟದ ರಿಟರ್ನ್ ಜಿಎಸ್​ಟಿಆರ್-1 ಸಲ್ಲಿಸಿವೆ. ಇದು ಕಳೆದ ವರ್ಷದ ಏಪ್ರಿಲ್​ನಲ್ಲಿ ಶೇಕಡಾ 73.9ರಷ್ಟು ಇತ್ತು.

    ಕಟ್ಟುನಿಟ್ಟಿನ ಕ್ರಮ

    ಸುಧಾರಿತ ಅನುಸರಣೆ ಮತ್ತು ವ್ಯಾಪಾರ ಚಟುವಟಿಕೆಯಲ್ಲಿ ಚೇತರಿಕೆಯಿಂದಾಗಿ ಜಿಎಸ್​ಟಿ ಆದಾಯ ಸಂಗ್ರಹದಲ್ಲಿ ಬೆಳವಣಿಗೆಯಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ತೆರಿಗೆ ಸಂಗ್ರಹ ಕ್ರಮಗಳಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ತೆರಿಗೆ ಆಡಳಿತವು ತೆರಿಗೆದಾರರು ಸಕಾಲಿಕವಾಗಿ ರಿಟರ್ನ್ಸ್ ಸಲ್ಲಿಸುವಂತೆ ತೆಗೆದುಕೊಂಡ ಹಲವಾರು ಕ್ರಮಗಳು ಸಾಕಷ್ಟು ಫಲ ನೀಡಿವೆ. ತಪು್ಪ ಮಾಡುವ ತೆರಿಗೆದಾರರ ವಿರುದ್ಧ ಕಟ್ಟುನಿಟ್ಟಾದ ಜಾರಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ.

    ಭಾರತೀಯ ಆರ್ಥಿಕತೆಗೆ ಉತ್ತಮ ಸುದ್ದಿ! ಕಡಿಮೆ ತೆರಿಗೆ ದರಗಳ ಹೊರತಾಗಿಯೂ ಹೆಚ್ಚುತ್ತಿರುವ ತೆರಿಗೆ ಸಂಗ್ರಹವು ಜಿಎಸ್​ಟಿ ಏಕೀಕರಣ ಮತ್ತು ಅನುಸರಣೆಯನ್ನು ಹೇಗೆ ಹೆಚ್ಚಿಸಿದೆ ಎಂಬುದರ ಯಶಸ್ಸನ್ನು ತೋರಿಸುತ್ತದೆ.

    | ನರೇಂದ್ರ ಮೋದಿ ಪ್ರಧಾನಿ

    ಕರ್ನಾಟಕಕ್ಕೆ ದ್ವಿತೀಯ ಸ್ಥಾನ

    ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. 2023ರ ಏಪ್ರಿಲ್ ತಿಂಗಳಲ್ಲಿ 33,196 ಕೋಟಿ ರೂಪಾಯಿ ಸಂಗ್ರಹದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು 14,593 ಕೋಟಿ ರೂ. ಸಂಗ್ರಹದೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಲ್ಲದೆ, ಕಳೆದ ವರ್ಷದ ಎಪ್ರಿಲ್​ಗೆ ಹೋಲಿಸಿದರೆ, 773 ಕೋಟಿ ರೂ. ಹೆಚ್ಚು ಸಂಗ್ರಹವು ಕರ್ನಾಟಕದಲ್ಲಾಗಿದೆ. 11,721 ಕೋಟಿ ರೂ. ಸಂಗ್ರಹದೊಂದಿಗೆ ಗುಜರಾತ್ ಮೂರನೇ ಸ್ಥಾನದಲ್ಲಿದೆ.

    ಏಕದಿನ ವಹಿವಾಟಿನಲ್ಲೂ ರೆಕಾರ್ಡ್

    ಒಂದೇ ದಿನದಲ್ಲಿ ಅತ್ಯಧಿಕ ಜಿಎಸ್​ಟಿ ಸಂಗ್ರಹ ದಾಖಲೆ ಕೂಡ 2023ರ ಏಪ್ರಿಲ್ ತಿಂಗಳಲ್ಲಿಯೇ ನಡೆದಿದೆ. ಏಪ್ರಿಲ್ 20 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. 9.58 ಲಕ್ಷ ವಹಿವಾಟುಗಳ ಮೂಲಕ 68,228 ಕೋಟಿ ರೂ. ಮೊತ್ತದ ಜಿಎಸ್​ಟಿ ಪಾವತಿಸಲಾಗಿದೆ. ಈ ಹಿಂದಿನ ಅತ್ಯಧಿಕ ಏಕದಿನ ಜಿಎಸ್​ಟಿ ಪಾವತಿ ದಾಖಲೆಯು ಕಳೆದ ವರ್ಷ ಇದೇ ತಾರೀಖಿನಂದು ಆಗಿದ್ದು, 9.6 ಲಕ್ಷ ವಹಿವಾಟುಗಳ ಮೂಲಕ -ಠಿ; 57,846 ಕೋಟಿ ಸಂಗ್ರಹವಾಗಿತ್ತು.

    ತೆರಿಗೆ ಸುಧಾರಣೆಯಲ್ಲಿ ಮೈಲಿಗಲ್ಲು

    ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯಾದ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) 2017ರ ಜುಲೈ 1ರ ಮಧ್ಯರಾತ್ರಿಯಂದು ದೇಶಾದ್ಯಂತ ಜಾರಿಗೆ ತರಲಾಯಿತು. ತೆರಿಗೆ ಸಂಗ್ರಹಣೆಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವುದರೊಂದಿಗೆ ಹಾಗೂ ಪ್ರತಿ ತಿಂಗಳು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹಿಸುವ ಮೂಲಕ ಒಂದು ಮಾದರಿ ಬದಲಾವಣೆಯನ್ನೇ ಜಿಎಸ್​ಟಿ ಮಾಡಿದೆ. ಅಬಕಾರಿ ಸುಂಕ, ಸೇವಾ ತೆರಿಗೆ, ವ್ಯಾಟ್ ಮತ್ತು ಸ್ಥಳೀಯ ತೆರಿಗೆಗಳನ್ನು ಒಟ್ಟುಗೂಡಿಸಿ ಜಿಎಸ್​ಟಿಯನ್ನು ರೂಪಿಸಲಾಗಿದೆ. ಜಿಎಸ್​ಟಿಯು ಹಣಕಾಸಿನ ಒಕ್ಕೂಟದ ಅಭೂತಪೂರ್ವ ನಿರ್ವಹಣೆಯ ಪ್ರತೀಕವಾಗಿದೆ. ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳು ಸೇರಿ ಜಿಎಸ್​ಟಿ ಮಂಡಳಿ ರಚಿಸಿಕೊಂಡಿದ್ದು, ಸುದೀರ್ಘ ಸಮಾಲೋಚನೆಗಳ ಮೂಲಕ ಈ ಹೊಸ ತೆರಿಗೆ ಪದ್ಧತಿಯ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡುತ್ತಿವೆ. ಬಹು ತೆರಿಗೆ ಮತ್ತು ಕರಗಳನ್ನು ಜಿಎಸ್​ಟಿ ಒಳಗೊಳ್ಳುವ ಮೂಲಕ ಹೊರೆ ಕಡಿಮೆ ಮಾಡಿದೆ. ಪ್ರಾದೇಶಿಕ ಅಸಮತೋಲನ ಮತ್ತು ಅಂತಾರಾಜ್ಯ ಅಡೆತಡೆಗಳನ್ನು ತೆಗೆದುಹಾಕಿದೆ. ಇದೇ ರೀತಿ ಪೆಟ್ರೋಲ್, ಡೀಸೆಲ್, ವಿದ್ಯುತ್ ಮುಂತಾದ ಇಂಧನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತಂದು ದೇಶಾದ್ಯಂತ ಏಕರೂಪ ತೆರಿಗೆಯನ್ನು ವಿಸ್ತರಿಸಬೇಕು ಎಂದು ಪರಿಣತರು ಹೇಳುತ್ತಾರೆ.

    ದಾಖಲೆ ಪ್ರಮಾಣದ ಸಂಗ್ರಹಕ್ಕೆ ಕಾರಣಗಳೇನು?

    • ಸುಧಾರಿತ ಆರ್ಥಿಕ ಚಟುವಟಿಕೆ ಮತ್ತು ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ನಂತರದ ಚೇತರಿಕೆ.
    • ಇ-ಇನ್​ವಾಯ್ಸಿಂಗ್, ಇ-ವೇ ಬಿಲ್​ಗಳು, ಡೇಟಾ ಅನಾಲಿಟಿಕ್ಸ್ ಮತ್ತು ಆಡಿಟ್​ಗಳ ಮೂಲಕ ತೆರಿಗೆ ತಪ್ಪಿಸಿಕೊಳ್ಳುವುದರ ವಿರುದ್ಧದ ಸರ್ಕಾರದ ಕ್ರಮಗಳು.
    • ಬಲವಾದ ಬೇಡಿಕೆ ಮತ್ತು ಬೆಳವಣಿಗೆ ಕಂಡ ಆಟೋಮೊಬೈಲ್​ಗಳು, ಗ್ರಾಹಕ ಬೆಲೆಬಾಳುವ ವಸ್ತುಗಳು, ಎಫ್​ಎಂಸಿಜಿ (ತ್ವರಿತ ಮಾರಾಟದ ಗ್ರಾಹಕ ವಸ್ತುಗಳು), ಐಟಿ ಮತ್ತು ಇ-ಕಾಮರ್ಸ್​ನಂತಹ ವಲಯಗಳಿಂದ ಹೆಚ್ಚಿನ ತೆರಿಗೆ ಸಂಗ್ರಹ.
    • ಅನೇಕ ಸರಕು ಸಾಮಗ್ರಿಗಳ ಬೆಲೆ ಏರಿಕೆ ಕೂಡ ಹೆಚ್ಚಿನ ಜಿಎಸ್​ಟಿ ಸಂಗ್ರಹವಾಗಲು ಒಂದಿಷ್ಟು ಕೊಡುಗೆ ನೀಡಿದೆ.

     

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts